

ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲಾದ್ಯಂತ ಶ್ರಾವಣ ಮಾಸದ ಎರಡನೇ ಶನಿವಾರ ರಾಮದೂತ ಆಂಜನೇಯಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆಗಳೊಂದಿಗೆ ವೈಭವೋಪೇತವಾಗಿ ಸ್ವಾಮಿಯ ಮೂರ್ತಿಯನ್ನು ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು.
ಮುಂಜಾನೆಯಿಂದಲೇ ಸ್ವಾಮಿಯ ಮೂರ್ತಿಗೆ ಅಭಿಷೇಕ ನೆರವೇರಿಸಿ, ಬೆಣ್ಣೆ, ನವ ಧಾನ್ಯಗಳು, ವಿವಿಧ ಬಗೆಯ ಪುಷ್ಪ, ಹಾರ, ವೀಳ್ಯದೆಲೆ ಸೇರಿ ಆಕರ್ಷಕ ವಸ್ತುಗಳಿಂದ ವಿಶೇಷ ಅಲಂಕಾರ ಸೇವೆ ಜರುಗಿತು. ಬೆಳಗ್ಗೆಯಿಂದ ರಾತ್ರಿ 9ರವರೆಗೂ ಸಾವಿರಾರು ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಕ್ಷೇಮದಾತ ಆಂಜನೇಯನ ದರ್ಶನ ಪಡೆದು ಕಣ್ತುಂಬಿಕೊಂಡರು.
ಕುಟುಂಬದ ಒಳಿತಿಗಾಗಿ ಹಲವರು ಪೂಜಾ ಸಾಮಗ್ರಿ ಸಮರ್ಪಿಸಿ, ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥನೆಯಲ್ಲಿ ಮಗ್ನರಾದರು. ಸುಪ್ರಭಾತ, ಸ್ತೋತ್ರ, ಕೀರ್ತನೆ ಸೇರಿ ವಿವಿಧ ಭಕ್ತಿ ಗೀತೆಗಳ ಮೂಲಕ ಭಕ್ತರು ಭಕ್ತಿಯಲ್ಲಿ ಮಿಂದೆದ್ದರು.
ಹೊರವಲಯದ ಕಣಿವೆ ಆಂಜನೇಯ ಸ್ವಾಮಿಗೆ ನೂರಾರು ಕೆ.ಜಿ. ಬೆಣ್ಣೆ, ವಿವಿಧ ಪುಷ್ಪ, ಹೂವಿನ ಹಾರಗಳಿಂದ ನೆರವೇರಿದ ಅಲಂಕಾರವನ್ನು ಅನೇಕ ಭಕ್ತರು ಕಣ್ತುಂಬಿಕೊಂಡರು.
ತಾಲೂಕಿನ ಸಿದ್ಧಾಪುರ ಆಂಜನೇಯ, ತಮಟಕಲ್ಲು ಆಂಜನೇಯ, ಮಾನಂಗಿ ಆಂಜನೇಯ, ಹೊಳಲ್ಕೆರೆ ರಸ್ತೆ 8ನೇ ಮೈಲು ಆಂಜನೇಯ, ನಗರದ ಬರಗೇರಿ ಆಂಜನೇಯ, ಹೌಸಿಂಗ್ ಬೋರ್ಡ್ ಕಾಲನಿಯ ಪಂಚಮುಖಿ ಆಂಜನೇಯ, ಬುರುಜನಹಟ್ಟಿ ತಗ್ಗಿನ ಆಂಜನೇಯ, ಕೋಟೆ ಆಂಜನೇಯ, ಆನೆಬಾಗಿಲು ಮತ್ತು ರಂಗಯ್ಯನಬಾಗಿಲು ಸಮೀಪದ ಆಂಜನೇಯ, ಜಿಲ್ಲಾ ಕ್ರೀಡಾಂಗಣ ಮಾರ್ಗದ ವೀರಾಂಜನೇಯ, ಮದಕರಿನಾಯಕ ವೃತ್ತ ಸಮೀಪದ ರಕ್ಷಾಂಜನೇಯ ಸೇರಿ ವಿವಿಧ ಆಂಜನೇಯ ಸ್ವಾಮಿ ದೇಗುಲಗಳಲ್ಲಿ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು. ನೆರೆದಿದ್ದ ಭಕ್ತರಿಗೆ ವಿವಿಧೆಡೆ ತೀರ್ಥ, ಪ್ರಸಾದ ವಿತರಿಸಲಾಯಿತು. ಅನ್ನಸಂತರ್ಪಣೆ ಕಾರ್ಯದಲ್ಲೂ ಅನೇಕ ಭಕ್ತರು ಪಾಲ್ಗೊಂಡಿದ್ದರು.