ನಿತ್ಯದ ಆಹಾರದಲ್ಲಿ ಗೆಡ್ಡೆ ಗೆಣಸು ಬಳಸಿ

gedde mela 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಮ್ಮ ಆಹಾರದ ಬಟ್ಟಲಿನಿಂದ ಗೆಡ್ಡೆ ಗೆಣಸುಗಳು ಮಾಯವಾಗಿವೆ. ಇವುಗಳ ನಿರಂತರ ಬಳಕೆಯಿಂದ ಶರೀರಕ್ಕೆ ರೋಗ ನಿರೋಧಕ ಶಕ್ತಿ ಪ್ರಾಪ್ತವಾಗುತ್ತದೆ. ಆರೋಗ್ಯಕರ ಜೀವನಕ್ಕೆ ಗೆಡ್ಡೆ ಗೆಣಸುಗಳ ಬಳಕೆ ಪೂರಕ ಎಂದು ಆಹಾರ ತಜ್ಞೆ ಹಾಗೂ ಬರಹಗಾರ್ತಿ ಮಾಲತಿ ಹೆಗಡೆ ಹೇಳಿದರು.

ಹುಬ್ಬಳ್ಳಿಯಲ್ಲಿ ಸಹಜ ಸಮೃದ್ಧ , ಆರೋಗ್ಯಯುತ ಆಹಾರ ಸೇವನೆಗೆ ನಿರ್ಲಕ್ಷಿತ ಬೆಳೆ ಮತ್ತು ಉತ್ಪನ್ನಗಳು ಮತ್ತು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಆಶ್ರಯದಲ್ಲಿ ಆಯೋಜಿಸಿದ್ದ ಗೆಡ್ಡೆ ಗೆಣಸು ಮೇಳದಲ್ಲಿ ಭಾನುವಾರ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಬರಗಾಲದ ಬೆಳೆಗಳು ಎಂದೇ ಪರಿಗಣಿಸಿರುವ ಗೆಡ್ಡೆ ಗೆಣಸುಗಳು ಪೋಷಕಾಂಶದ ಖಜಾನೆ. ಹಲವು ಬಗೆಯ ಗೆಡ್ಡೆ ಗೆಣಸು ಇರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿಯ ಅಧ್ಯಕ್ಷ ಬಾಪುಗೌಡ ಬಿರಾದಾರ ಮಾತನಾಡಿ ಗೆಡ್ಡೆ ಗೆಣಸುಗಳು ನಮ್ಮ ದಿನನಿತ್ಯದ ಅಡುಗೆಯ ಭಾಗವಾಗಬೇಕು ಎಂದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಕಾರ್ಯದರ್ಶಿ ಎ.ವಿ.ಸಂಕನೂರ ಮಾತನಾಡಿ, ಗೆಡ್ಡೆ ಗೆಣಸುಗಳ ಬಗ್ಗೆ ಹುಬ್ಬಳ್ಳಿಯ ಜನತೆಗೆ ಅರಿವು ಮೂಡಿಸಲು ಮೇಳ ಏರ್ಪಡಿಸಿದ್ದು, ಅದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಗೆಡ್ಡೆ ಗೆಣಸು ಮತ್ತು ಇತರೆ ನಿರ್ಲಕ್ಷಿತ ಬೆಳೆಗಳನ್ನು ಜನಪ್ರಿಯಗೊಳಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಚಿತ್ರಕಲಾ ಸ್ಪರ್ಧೆಯ ತೀರ್ಪಗಾರರಾದ ಶಿಲ್ಪಾ ಬಂಕಾಪುರ ಮತ್ತು ರತ್ನಾ ಮೂಶಿಲ್ಲಿ, ದೇವಧಾನ್ಯ ರೈತ ಉತ್ಪಾದಕರ ಕಂಪನಿಯ ಸೂರ್ಯಕಾಂತ ಶೇಗುಣಸೆ ಮತ್ತು ಮೇಳದ ಆಯೋಜಕರಾದ ಪ್ರಕಾಶ ಹಿರೇಮಠ ಮತ್ತು ಶ್ರೀದೇವಿ ಉಪಸ್ಥಿತರಿದ್ದರು. ಈಶ್ವರಪ್ಪ ಅಂಗಡಿ ನಿರೂಪಿಸಿದರು.

ಧ್ವನಿ, ಸಾನ್ವಿ ಪ್ರಥಮ

ಗೆಡ್ಡೆ ಗೆಣಸು ಚಿತ್ರಕಲಾ ಸ್ಪರ್ಧೆಯ 5-10 ವರ್ಷದ ಮಕ್ಕಳ ವಿಭಾಗದಲ್ಲಿ ಧ್ವನಿ ಕರ್ವಾ( ಪ್ರಥಮ), ಪಿಹು ಕಬಾಡೆ ( ದ್ವಿತೀಯ), ಚಿತ್ರಾಲಿ ಶೇಟ್ ( ತೃತೀಯ) ಮತ್ತು 10-15 ವರ್ಷದ ಮಕ್ಕಳ ವಿಭಾಗದಲ್ಲಿ ಸಾನ್ವಿ ಯರಗುಪ್ಪ ( ಪ್ರಥಮ), ಅಪೂರ್ವ ಶೇಟ್( ದ್ವಿತೀಯ), ಯಶವಂತ ಮುಂಡರಗಿ ( ತೃತೀಯ) ಬಹುಮಾನ ಗಳಿಸಿದರು.

ಆಹಾರ ತಜ್ಞೆ ಮಾಲತಿ ಹೆಗಡೆಯವರು ಗೆಡ್ಡೆ ಗೆಣಸಿನ ಖಾದ್ಯಗಳಾದ ನೀಲಿ ಗೆಣಸಿನ ಹಲ್ವಾ, ಕಿತ್ತಳೆ ಗೆಣಸಿನ ಚಿಪ್ಸ್, ಬಿಳಿ ಗೆಣಸಿನ ಬಜ್ಜಿ, ನೀಲಿ ಗೆಣಸಿನ ಬೋಂಡಾ ಮತ್ತು ಪಾಯಸಗಳನ್ನು ಮಾಡಿ ತೋರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net