

ಅಮೀನಗಡ: ತಂದೆ- ತಾಯಂದಿರು ಶಾಲೆಗೆ ಮಕ್ಕಳನ್ನು ಸೇರಿದರೆ ಸಾಲದು ಪ್ರತಿನಿತ್ಯ ತಪ್ಪದೆ ಶಾಲೆಗೆ ಕಳಿಸುವುದು ಮುಖ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣ ಸಮೀಪ ಸೂಳೆಭಾವಿಯಲ್ಲಿ ಮಂಗಳವಾರ ರಾಮಯ್ಯಸ್ವಾಮಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೂತನ ಕಟ್ಟಡ, ಕೆ. ನಾರಾಯಣ ಸಭಾಭವನ ಲೋಕಾರ್ಪಣೆ ಹಾಗೂ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ, ಸ್ವರ್ಣ ಸಂಚಿಕೆ ಬಿಡುಗಡೆ, ದಾನಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದ್ದು, ಇದಕ್ಕಾಗಿ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ರಾಜ್ಯದಲ್ಲಿ ಅಂದಾಜು 25 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸಿಇಟಿ, ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಹಲವು ಉಚಿತ ಕೋಚಿಂಗ್ ನೀಡಲಾಗುತ್ತದೆ ಎಂದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಸಿಎಂ ಹಾಗೂ ಸಚಿವ ಮಧು ಬಂಗಾರಪ್ಪನವರ ಸಹಕಾರದಿಂದ ಕ್ಷೇತ್ರದ ನೂರು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ರವೀಂದ್ರ ಕಲಬುರ್ಗಿ ಪ್ರಾಸ್ತವಿಕವಾಗಿ ಮಾತನಾಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ವಿಜಯಾನಂದ ಕಾಶಪ್ಪನವರ ‘ಜ್ಞಾನ ದೀಪ ಸ್ಮರಣೆ ಸಂಚಿಕೆ ಬಿಡುಗಡೆ’ ಮಾಡಿದರು. ಹಂಪಿ ಹೇಮಕೂಟದ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ಗುಳೇದಗುಡ್ಡದ ಬಸವರಾಜ ಪಟ್ಟದಾಯ ಸ್ವಾಮೀಜಿ, ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ ಇದ್ದರು.
ಶಾಸಕ ಎಚ್.ವೈ. ಮೇಟಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ರಾಮಯ್ಯ ಸ್ವಾಮಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಸಂಸ್ಥೆಯ ಉಪಾಧ್ಯಕ್ಷ ಮನೋಹರ ಕಮ್ಮಾರ, ನಿರ್ದೇಶಕ ಶಂಕ್ರಪ್ಪ ಜನಿವಾರದ, ರಮೇಶ ಕುರಿ, ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ ಇದ್ದರು.