ನಿತ್ಯ ದೇವಿ ದರ್ಶನಕ್ಕೆ ಹೆಚ್ಚಾಗುತ್ತಿರುವ ಭಕ್ತರ ಸಂಖ್ಯೆ

ನಿತ್ಯ ದೇವಿ ದರ್ಶನಕ್ಕೆ  ಹೆಚ್ಚಾಗುತ್ತಿರುವ ಭಕ್ತರ ಸಂಖ್ಯೆ
Published on

ಹಾಸನ: ಶಕ್ತಿದೇವತೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ದಿನ ಹತ್ತಿರ ಬರುತ್ತಿರುವಂತೆ ನಿತ್ಯ ದೇವಿಯ ದರ್ಶನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದೇವಿಯ ಸಾರ್ವಜನಿಕ ದರ್ಶನದ 12ನೇ ದಿನವಾದ ಸೋಮವಾರ ಅತಿಹೆಚ್ಚು ಸಂಖ್ಯೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಭಕ್ತರನ್ನು ನಿಯಂತ್ರಿಸಲು ಪರದಾಡುತ್ತಿವೆ.

ವಿಶೇಷ ದರ್ಶನದ ಸಾಲುಗಳು ಸಹ ಕಿ.ಮೀ. ಉದ್ದಕ್ಕೆ ಬೆಳೆದಿದ್ದವು. 1000 ರೂ. ಹಾಗೂ 300 ರೂ.ಗಳ ಟಿಕೆಟ್‌ಗಳ ಸಾಲಿನಲ್ಲಿ ಸಹ ನೂಕುನುಗ್ಗಲು ಕಂಡು ಬಂದಿತು. ವಿಶೇಷ ದರ್ಶನದ ಪಾಸ್ ಪಡೆದಿದ್ದವರೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮೂರು ಸಾಲುಗಳನ್ನಾಗಿ ಮಡಿ ಒಳಬಿಡಲಾಯಿತು. ವಿಶೇಷ ಸಾಲಿನಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದರಿಂದ ಸಾಮಾನ್ಯ ಸಾಲಿನ ಭಕ್ತರು ಮುಂದೆ ಸಾಗಿ ದರ್ಶನ ಪಡೆಯಲು ಸ್ವಲ್ಪ ಸಮಯ ಕಿರಿಕಿರಿ ಉಂಟಾಗಿತ್ತು. ಎಲ್ಲಾ ಭಕ್ತಾಧಿಗಳೂ ದೇವರ ದರ್ಶನ ಪಡೆದೇ ಹೋಗಬೇಕು ಎಂದು ಹಠಹೊತ್ತು ನಿಂತು ದರ್ಶನ ಪಡೆದರು.
ಹಾಸನ ಜಿಲ್ಲೆಯವರೇ ಆದ ಇಸ್ರೋ ಮಾಜಿ ಅಧ್ಯಕ್ಷ ಎಚ್.ಎ. ಕಿರಣ್ ಕುಮಾರ್ ಅವರು ಸೋಮವಾರ ತಮ್ಮ ಕುಟುಂಬ ಮತ್ತು ಬಂಧುಗಳೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಜೊತೆಯಲ್ಲಿದ್ದರು.

ದರ್ಶನಕ್ಕೆ ಒಂದೇ ದಿನ ಬಾಕಿ, ಅ.26 ಇಡೀ ರಾತ್ರಿ ದರ್ಶನ:
ಇದುವರೆಗೂ ಲಕ್ಷಾಂತರ ಭಕ್ತರು ಆಗಮಿಸಿ ಹಾಸನಾಂಬೆ ದರ್ಶನ ಪಡೆದು ಹೋಗಿದ್ದಾರೆ. ಅ.13 ರಂದು ಗರ್ಭಗುಡಿಯ ಬಾಗಿಲು ತೆಗೆದಿದ್ದು, ಅ.14 ರಿಂದ ಸಾರ್ವಜನಿಕ ದರ್ಶನ ನಡೆಯುತ್ತಿದೆ. ಗ್ರಹಣದ ಪ್ರಯುಕ್ತ ಅ.25 ರಂದು ದೇವಿಯ ದರ್ಶನ ಇರುವುದಿಲ್ಲ. ಅ.26 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತ್ತು ರಾತ್ರಿ 11 ಗಂಟೆಯಿಂದ ಮರುದಿನ ಬೆಳಗ್ಗೆ 7 ಗಂಟೆಯವರೆಗೆ ಇಡೀ ರಾತ್ರಿ ದೇವಿಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುತ್ತದೆ. ಅ.27 ಬೆಳಗ್ಗೆ 7 ಗಂಟೆ ನಂತರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ. ಅಂದು ಮಧ್ಯಾಹ್ನ 12 ಗಂಟೆಗೆ ದೇವಿಯ ಗರ್ಭಗುಡಿಯ ಬಾಗಿಲು ಹಾಕಲಾಗುವುದು.

ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ :
ದೇವಾಲಯದಲ್ಲಿ ಭಕ್ತರನ್ನು ಸಂತೈಸುವ ಕೆಲಸವನ್ನು ಪೊಲೀಸರು, ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ದೇವಾಲಯದ ಆಡಳಿತ ಮಂಡಳಿ ಮಾಡುತ್ತಿದ್ದರು. ಭಕ್ತರ ಆರೋಗ್ಯ ತಪಾಸಣೆಗೆ ವೈದ್ಯರು ಸಿದ್ಧರಾಗಿದ್ದಾರೆ. ನಗರಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಲಕ್ಷಾಂತರ ಭಕ್ತರು ಬಂದು ಹೋಗಿದ್ದರೂ ದೇವಾಲಯದ ಆವರಣವನ್ನು ಸುಂದರವಾಗಿ ಮತ್ತು ಸ್ವಚ್ಛವಾಗಿ ಇಡಲಾಗಿದೆ.

4 ಕೋಟಿ ರೂ. ಆದಾಯ ನಿರೀಕ್ಷೆ:
ಕಳೆದ 11 ದಿನಗಳಿಂದ ಹಾಸನಾಂಬೆ ದರ್ಶನ ಯಶಸ್ವಿಯಾಗಿ ನಡೆಯುತ್ತಿದ್ದು ಈವರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ನಿತ್ಯ 40 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ ಎಂದು ದೇವಾಲಯದ ಆಡಳಿತಾಧಿಕಾರಿ ಆಗಿರುವ ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್ ಮಾಹಿತಿ ನೀಡಿದರು.
ವಿಶೇಷ ಟಿಕೆಟ್‌ಗಳು ಮತ್ತು ಲಾಡುಗಳ ಮಾರಾಟದಿಂದ ಅ.23 ರವರೆಗೆ ದೇವಾಲಯಕ್ಕೆ ಒಂದೂವರೆ ಕೋಟಿ ರೂ.ಗಳಿಗೂ ಹೆಚ್ಚಿನ ಆದಾಯ ಬಂದಿದೆ. ಹುಂಡಿಯಲ್ಲಿ ಸಂಗ್ರಹವಾಗಿರುವ ಹಣವನ್ನು ದರ್ಶನೋತ್ಸವದ ಮುಗಿದ ನಂತರ ಎಣಿಕೆ ಮಾಡಲಾಗುವುದು. ಈ ಬಾರಿ ಒಟ್ಟು 4 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.

ದೇವಿ ದರ್ಶನ ಪಡೆದ ಶಾಸಕ ನಾಗೇಂದ್ರ:
ಭಾನುವಾರ ಹಾಸನಾಂಬ ದೇವಿ ದರ್ಶನ ಪಡೆಯಲು ಆಗಮಿಸಿದ್ದ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ರಾಜಗೋಪುರದ ಬಳಿ ಗಂಟೆಗಟ್ಟಲೆ ಕಾದು ಶಾಸಕ ಪ್ರೀತಂಗೌಡ ವಿರುದ್ಧ ಅಸಮಾಧಾನಗೊಂಡು ಹಿಂದಿರುಗಿದ್ದರು. ಸೋಮವಾರ ಕುಟುಂಬ ಸಮೇತ ಆಗಮಿಸಿದ ಶಾಸಕ ನಾಗೇಂದ್ರ ಅವರನ್ನು ಹಾಸನದ ಶಾಸಕ ಪ್ರೀತಂಗೌಡ ನಗುಮುಖದಿಂದ ಸ್ವಾಗತಿಸಿ, ಹಾಸನಾಂಬೆ ಮತ್ತು ಸಿದ್ದೇಶ್ವರಸ್ವಾಮಿ ದರ್ಶನ ಮಾಡಿಸಿದರು.
ನಂತರ ಮಾದ್ಯಮದೊಂದಿಗೆ ಮಾತನಾಡಿದ ನಾಗೇಂದ್ರ, ದೀಪಾವಳಿ ಅಮಾಸ್ಯೆಯ ಹಿಂದಿನ ದಿನ ದೇವಿಯ ದರ್ಶನ ಪಡೆದ ಪುಣ್ಯ ಸಿಕ್ಕಿದೆ. ಮೈಸೂರಿನ ಚಾಮುಂಡೇಶ್ವರಿ ತಾಯಿಯಂತೆ ಹಾಸನಾಂಬೆ ಮಹಿಮೆಯೂ ದೊಡ್ಡದು. ಭಾನುವಾರ ನಡೆದ ಘಟನೆಯನ್ನು ಮರೆತು ಪ್ರೀತಂ ರಾತ್ರಿ 3 ಬಾರಿ ಕರೆ ಮಾಡಿ ದೇವಿಯ ದರ್ಶನಕ್ಕೆ ಆಹ್ವಾನಿಸಿದರು. ಎಸ್‌ಪಿ ಅವರೂ ಕೂಡ 1 ಬಾರಿ ಕರೆ ಮಾಡಿ ಆಮಂತ್ರಣ ನೀಡಿದರು ಎಂದು ತಿಳಿಸಿದರು.

ಕ್ಷಮೆಯಾಚಿಸಿದ ಪ್ರೀತಂ:
‘ನಮ್ಮಿಬ್ಬರಲ್ಲಿ ಸಲಿಗೆ ಹೆಚ್ಚಾಗಿದ್ದು ಅಣ್ಣ ತಮ್ಮಂದಿರಂತೆ ಇದ್ದೇವೆ. ನಾಗೇಂದ್ರ ನನಗಿಂತ ದೊಡ್ಡವನು, ಆತನಿಗೆ ನನ್ನನ್ನು ಬೈಯುವ ಹಕ್ಕು ಇದೆ. ಸಂವಹನ ಕೊರತೆಯಿಂದ ಭಾನುವಾರ ಸಮಸ್ಯೆ ಉಂಟಾಗಿತ್ತು. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಶಾಸಕ ಪ್ರೀತಂಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net