

ಕಲಬುರಗಿ: ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ೨೦೨೩ರಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಣಕ್ಕೆ ಇಳಿದು ಅಭ್ಯರ್ಥಿ ಸೋಲಿಗೆ ಕಾರಣವಾಗಿರುವ ನಿತಿನ್ ಗುತ್ತೇದಾರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಬಿಜೆಪಿ ಮುಖಂಡ ಸಿದ್ದರಾಮ ಸಾಲಿಮನಿ, ಷಣ್ಮುಖಪ್ಪ ಶಿಬರಭಂಡಿ, ಭೂಕಾಂತ ಪಾಟೀಲ್ ಸೇರಿ ಇತರರು ಆಗ್ರಹಿಸಿದರು.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಸೋಲಿಲ್ಲದ ಸರ್ದಾರ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದಾರೆ. ಪಕ್ಷ ಸಂಘಟನೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಂತ ನಾಯಕರ ವಿರುದ್ಧದ ನಡೆಯನ್ನು ಖಂಡಿಸುತ್ತೇವೆ ಎಂದು ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಅದರ ಸೂಚನೆ ಮೀರಿ ಪಕ್ಷೇತರವಾಗಿ ಸ್ಪರ್ಧಿಸಿ ಸೋಲಿಗೆ ಕಾರಣರಾಗಿದ್ದಾರೆ. ಆದ್ದರಿಂದ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಛಾಟಿಸಲಾಗಿದೆ. ಇದೀಗ ಪುನಃ ಸೇರ್ಪಡೆಯ ಮಾತುಗಳು ಬರುತ್ತಿದ್ದು, ಇದರಿಂದ ಪಕ್ಷಕ್ಕೆ ಧಕ್ಕೆ ಆಗಲಿದೆ. ಕಾಂಗ್ರೆಸ್ ಬಾಗಿಲು ಮುಚ್ಚಿರುವುದರಿಂದ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು ಎಂದರು.
ನರೇAದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕಳೆದ ಒಂದು ವರ್ಷದಿಂದ ಮಾಲಿಕಯ್ಯ ಗುತ್ತೇದಾರ್ ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿಯೂ ಸಕ್ರೀಯವಾಗಿ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆ ಮಾಡಿದ್ದಾರೆ. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ೩೭ ಸಾವಿರ ಮತಗಳ ಲೀಡ್ ನೀಡಲಾಗಿದೆ. ಈ ಬಾರಿಯೂ ಭಾರಿ ಅಂತರದ ಮತ ನೀಡಲಾಗುವುದು. ಯಾರ ಅನಿವಾರ್ಯತೆಯೂ ಬಿಜೆಪಿ ಪಕ್ಷಕ್ಕೆ ಇಲ್ಲ ಎಂದು ಹೇಳಿದರು.
ರಾಮಣ್ಣ ನಾಯ್ಕೋಡಿ, ಸುರೇಶ ಹಲಸಂಗಿ, ಶ್ರೀಮಂತ ಭಂಡಾರಿ, ಪರಶುರಾಮ ರಾಠೋಡ್, ದಿಲೀಪ ಪಾಟೀಲ್ ಇತರರಿದ್ದರು.
ಮುಂದಿನ ನಿರ್ಧಾರದ ಎಚ್ಚರಿಕೆ: ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ಗಮನಕ್ಕೆ ತರದೇ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿತಿನ್ ಗುತ್ತೇದಾರ್ ಅವರನ್ನು ಜಿಲ್ಲೆ, ರಾಜ್ಯ ನಾಯಕರು ಬಿಜೆಪಿ ಸೇರ್ಪಡೆ ಮಾಡಿಕೊಂಡರೆ ನಿಷ್ಠಾವಂತ ಕಾರ್ಯಕರ್ತರು ಪರ್ಯಾಯ ಯೋಚಿಸಬೇಕಾಗುತ್ತದೆ. ಚುನಾವಣೆಯಲ್ಲಿ ಇದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿದ್ದರಾಮ ಸಾಲಿಮನಿ ಎಚ್ಚರಿಕೆ ನೀಡಿದರು.