

ಸಂಕೇಶ್ವರ: ನಿಡಸೋಸಿ ಮಠದಲ್ಲಿ ಜರುಗುವ ಅನ್ನಪ್ರಸಾದಕ್ಕೆ ಭಕ್ತಿ, ಜ್ಞಾನದ ಹಸಿವು ನೀಗಿಸುವ ಶಕ್ತಿಯಿದೆ ಎಂದು ಶಿವಮೊಗ್ಗದ ಬೆಕ್ಕಿನಕಲ್ಮಠ ಜಗದ್ಗುರು ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಸಮೀಪದ ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಮಹಾದಾಸೋಹ ಮಹೋತ್ಸವದಲ್ಲಿ ಸೋಮವಾರ ಅನ್ನಪ್ರಸಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಧಾರ್ಮಿಕತೆ ಎಂದರೆ ಕೇವಲ ಪ್ರಾರ್ಥನೆಯಿಂದ ದೇವರನ್ನೊಲಿಸುವ ಕಾರ್ಯವಲ್ಲ. ಶ್ರಮ, ಕಾಯಕ, ದಾನಗಳ ಮೂಲಕ ಭಕ್ತರು ಮಾಡುವ ವಿಶೇಷ ಭಕ್ತಿಯೇ ಧಾರ್ಮಿಕತೆ. ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ನಡೆಯುವ ಮಹಾದಾಸೋಹ ಭಕ್ತಿ ಪ್ರಭುತ್ವ ಸಾಧಿಸಿದೆ ಎಂದರು.
ಹುಬ್ಬಳ್ಳಿ-ನಿಡೋಣಿ ಎರಡೆತ್ತಿನಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶ್ರೀಮಠದ ದಾಸೋಹದಲ್ಲಿ ಗಡಿಭಾಗದ ಹಳ್ಳಿಗಳ ಭಕ್ತರು ಅಡುಗೆ ಪಾತ್ರೆ ಹಿಡಿದು ಪ್ರಸಾದ ಮುಗಿಯುವವರೆಗೆ ತಮ್ಮ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ಹಂಚಿಕೊಂಡು ಮಹಾದಾಸೋಹ ಮಹೋತ್ಸವವನ್ನು ಹಬ್ಬದಂತೆ ಆಚರಿಸುವ ಪರಂಪರೆ ನೋಡುವುದು ನಮ್ಮ ಸೌಭಾಗ್ಯ ಎಂದರು.
ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಚೇತನ ದೇವರು ಮಾತನಾಡಿ, ಗಡಿಭಾಗದ ಭಕ್ತರ ಭಕ್ತಿ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಸದಾ ಸಮಾಜದ ಹಿತ ಬಯಸುವ ಶ್ರೀಗಳ ಮಾರ್ಗದರ್ಶನ ಗಡಿಭಾಗದ ಸಂಸ್ಕೃತಿ-ಸಂಸ್ಕಾರ ಹಿರಿಮೆ ಹೆಚ್ಚಿಸಲು ಕಾರಣ ಎಂದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಯುವಕರು-ಹಿರಿಯರು ತಮ್ಮ ಕಾರ್ಯಗಳನ್ನು ಹಂಚಿಕೊಂಡು ಭಕ್ತಿಯಿಂದ ಮಾಡುವ ಸತ್ಪರಂಪರೆಯಲ್ಲಿ ಎಲ್ಲರೂ ಭಾಗಿಯಾಗಿರುವುದು ಸಂತಸದ ಸಂಗತಿ ಎಂದರು.
ಮಠದ ಹಕ್ಕುದಾರರಾದ ನಣದಿಯ ವಿಜಯಸಿಂಹ ನಾನಾಸಾಹೇಬ, ನಿಂಬಾಳಕರ ಸರದೇಸಾಯಿ, ಸಂಕೇಶ್ವರದ ಕಣಗಲಿ ಕುಟುಂಬದಿಂದ ಪ್ರಸಾದಕ್ಕೆ ಚಾಲನೆ ನೀಡಲಾಯಿತು. ಪ್ರಸಾದಕ್ಕೆ 25 ಕ್ವಿಂಟಾಲ್ ಹುಗ್ಗಿ, 30 ಕ್ವಿಂಟಾಲ್ ಅನ್ನ, ಸಾಂಬಾರ, ಕಾಯಿಪಲ್ಯೆ ಮಾಡಲಾಗಿತ್ತು.
ಚಿಕ್ಕೋಡಿಯ ಸಂಪಾದನಾ ಮಠದ ಚರಮೂರ್ತಿ ಸ್ವಾಮೀಜಿ, ಮಂಗಳೂರು ರಾಮಕೃಷ್ಣಾಶ್ರಮದ ಸ್ವಾಮಿ ಏಕಗಮ್ಯಾನಂದಜೀ, ಜಡಿಮಠದ ಡಾ. ಮಹಾಂತ ಸ್ವಾಮೀಜಿ, ಎ.ಬಿ.ಪಾಟೀಲ, ಯುವ ಧುರೀಣ ಪೃಥ್ವಿ ಕತ್ತಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.