

ಗುಬ್ಬಿ: ನಿಟ್ಟೂರನ್ನು ಇಬ್ಭಾಗ ಮಾಡಿದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸುಮಾರು ಒಂದೂವರೆ ಕಿಮೀ ಸುತ್ತುವರಿದು ಓಡಾಡುವ ಅವೈಜ್ಞಾನಿಕ ಸೇತುವೆಗೆ ಕೂಡಲೇ ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ಆಗ್ರಹಿಸಿ ನಿಟ್ಟೂರು ಗ್ರಾಮಸ್ಥರು ಗುರುವಾರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನಿಟ್ಟೂರು ಸರ್ಕಲ್ ಬಳಿ ನೂರಾರು ಮಂದಿ ಒಂದು ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡಿದರು.
300 ಮೀಟರ್ ಮೇಲ್ಸೇತುವೆಗೆ ಸರ್ಕಲ್ ಬಳಿ ಅಂಡರ್ಪಾಸ್ ಇದೆ. ಆದರೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಒಂದೂವರೆ ಕಿಮೀ ಸುತ್ತುವರಿದು ಹೋಗುವ ಮಾರ್ಗ ಮಧ್ಯೆ ಅಂಡರ್ಪಾಸ್ ಅತ್ಯಗತ್ಯವಿದೆ. ಇಲ್ಲಿನ ಅನನುಕೂಲದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಹೆದ್ದಾರಿ ಪ್ರಾಧಿಕಾರ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸರ್ಕಾರಿ ಕಚೇರಿ, ಶಾಲೆಗಳು, ಆಸ್ಪತ್ರೆ, ಸ್ಮಶಾನ ಹೀಗೆ ಎಲ್ಲದಕ್ಕೂ ಪರದಾಡುವ ದು@ಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.
ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್ ಮಾತನಾಡಿ, ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಆರಂಭದಲ್ಲೇ ಈ ಸಂಕಷ್ಟದ ಬಗ್ಗೆ ಅಧಿಕಾರಿಗಳಿಗೆ ಹೇಳಲಾಗಿತ್ತು. ಹಲವು ಬಾರಿ ಮನವಿ ಮಾಡಿದ್ದರೂ ಅಂಡರ್ ಪಾಸ್ ಬಗ್ಗೆ ಚಕಾರ ಎತ್ತಲಿಲ್ಲ. ಸೇತುವೆಗೆ ಮಣ್ಣು ಸುರಿದು ಕೆಲಸ ಆರಂಭಿಸಿದಂತೆ ಸ್ಥಳಿಯರ ಸಮಸ್ಯೆ ಅರಿವಿಗೆ ಬಂದಿದೆ. ಹೊಲ ಗದ್ದೆಗೆ ತೆರಳಲು ಪರದಾಟ, ಆಸ್ಪತ್ರೆಗೆ ರೋಗಿಗಳು ಹೋಗಲು ಸಹ ಹಿಂಸೆ ಪಡಬೇಕಾಗಿದೆ. ಇಲ್ಲಿ ಅಂಡರ್ ಪಾಸ್ಮಾರ್ಗ ನಿರ್ಮಿಸಬೇಕು ಮತ್ತು ಕೂಡಲೇ ಕಾಮಗಾರಿ ಸ್ಥಗಿತಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮಕ್ಕಳು ಶಾಲೆಗೆ ತೆರಳಲು ತೊಂದರೆ ಪಡುವಂತಾಯಿತು. ಇಲ್ಲಿನ ವಾಸ್ತವ ಅವಲೋಕಿಸಿ ಅನಂತರ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿ ಎಂದು ಗ್ರಾಪಂ ಸದಸ್ಯೆ ಮಂಗಳ ಗೌರಮ್ಮ ಒತ್ತಾಯಿಸಿದರು.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ತಂಡ: ಪ್ರತಿಭಟನೆ ಆರಂಭವಾದ ಒಂದು ಗಂಟೆ ಬಳಿಕ ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಬಿ. ಆರತಿ ಪ್ರತಿಭಟನಾನಿರತರ ಜತೆ ಚರ್ಚಿಸಿದರು. ಜನರ ಸಮಸ್ಯೆ ಖುದ್ದು ಪರಿಶೀಲಿಸಲು ಮೇಲ್ಸೇತುವೆ ಸುತ್ತುವರಿದು ಕಾಲ್ನಡಿಗೆ ನಡೆಸಿ ನಂತರ ಅವಶ್ಯವಿರುವ ಅಂಡರ್ ಪಾಸ್ ದಾರಿ ಬಗ್ಗೆ ಪ್ರಾಧಿಕಾರದ ಜತೆ ಚರ್ಚಿಸಿ ಸರ್ಕಾರದ ಗಮನಕ್ಕೂ ತರುವ ಭರವಸೆ ನೀಡಿ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಪಂ ಸದಸ್ಯರಾದ ನರಸೇಗೌಡ, ಮಂಗಳಮ್ಮ, ಹಸೀನಾ ತಾಜ್, ಸ್ಥಳಿಯರಾದ ಎನ್.ಸಿ.ಶಿವಣ್ಣ, ಯೋಗೀಶ್, ಎನ್.ಎ.ನಾಗರಾಜು, ನಾಗಭೂಷಣ್ ಇದ್ದರು.
2 ಕಿಮೀ ಶವ ಹೊತ್ತು ಸಾಗಬೇಕಾದ ಅನಿವಾರ್ಯತೆ
ಮೇಲ್ಸೇತುವೆ ಆರಂಭದಲ್ಲಿ ಈ ಅವ್ಯವಸ್ಥೆ ತಿಳಿದಿರಲಿಲ್ಲ. ಹೆದ್ದಾರಿ ಇಡೀ ಊರನ್ನೇ ಎರಡು ಭಾಗವಾಗಿಸಿದೆ. ಸ್ಮಶಾನಕ್ಕೆ ಎರಡು ಕಿಮೀ ಶವ ಹೊತ್ತು ಸಾಗಬೇಕಾದ ಅನಿವಾರ್ಯ ಎದುರಾಗಿದೆ. ಸುಮಾರು 300 ಮನೆಗಳು ಸಣ್ಣ ಪುಟ್ಟ ಕೆಲಸಕ್ಕೂ ಒಂದೂವರೆ ಕಿ.ಮೀ. ಸುತ್ತವರಿಯಬೇಕಾಗಿದೆ. ವ್ಯಾಪಾರ ಕೇಂದ್ರವಾದ ನಿಟ್ಟೂರು ಈಗ ಕರಾಳ ಎನಿಸುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರ ಬಾಬು ಹೇಳಿದರು. ಸ್ಥಳಿಯರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಸಂಸದರಿಗೆ ತಡವಾಗಿ ಈ ಕಷ್ಟದ ಬಗ್ಗೆ ತಿಳಿದಿದೆ. ಪ್ರಾಧಿಕಾರದೊಂದಿಗೆ ಮಾತನಾಡಿ ಅಂಡರ್ಪಾಸ್ ಮಾಡಿಸುವ ಭರವಸೆ ಸಂಸದರು ನೀಡಿದ್ದಾರೆ ಎಂದರು.