

ಕಲಘಟಗಿ: ಲಾಕ್ಡೌನ್ ಜಾರಿಯಾದಾಗಿನಿಂದ ಪರೀಕ್ಷೆ ಭಯದಲ್ಲಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶುಕ್ರವಾರ ಹಿಂದಿ ಪರೀಕ್ಷೆ ಬರೆದು ನಿಟ್ಟುಸಿರು ಬಿಟ್ಟರು. ಮಹಾಯುದ್ಧ ಗೆದ್ದ ಖುಷಿ ಅವರ ಮುಖದಲ್ಲಿತ್ತು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗುತ್ತಿರುವುದರಿಂದ ವಿದ್ಯಾರ್ಥಿಗಳು, ಪಾಲಕರಲ್ಲಿ ನಡುಕವಿತ್ತು. ಮನೆಯಿಂದ ಹೊರಗಡೆ ಬರಲು ಹಿಂಜರಿಯುತ್ತಿದ್ದ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಜೂ. 25ರಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಹಾಜರಾಗಿ ಈಗ ರಿಲೀಫ್ ಆಗಿದ್ದಾರೆ.
ತಾಲೂಕಿನ 7 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಪೂರ್ವ ತಯಾರಿ, ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ, ಕರೊನಾ ಭೀತಿ ನಿವಾರಣೆ, ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷೆ ಮುಗಿದ ಬಳಿಕ ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಹಲವರು ಹಗಲಿರುಳು ಶ್ರಮಿಸಿದ್ದಾರೆ. ಅದರಲ್ಲೂ ತಾಲೂಕಾಡಳಿತ, ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ, ಸಾರಿಗೆ ಸಂಸ್ಥೆ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ, ಭಾರತ ಸೇವಾದಳ, ಆಶಾ ಕಾರ್ಯಕರ್ತೆಯರು, ಸ್ವಾಮಿ ವಿವೇಕಾನಂದ ಯುತ್ ಮೂವ್ವೆುಂಟ್, ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನಿಯ ಎಂದು ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ತಿಳಿಸಿದರು.
ಪರೀಕ್ಷೆಗಾಗಿ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ ಇಸ್ಕಾನ್ನಿಂದ ಹಾಲು, ಬಿಸ್ಕತ್ ವಿತರಿಸಲಾಗಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಕುಮಾರ ಕೆ.ಎಫ್., ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ ಹೇಳಿದರು.
ಹಿಂದಿ ಪರೀಕ್ಷೆ ಸುಗಮ: ಸಂಶಿ ಎಸ್ಜೆಎಫ್ಎಸ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆ ಶುಕ್ರವಾರ ಸುಗಮವಾಗಿ ನಡೆಯಿತು. ಮಕ್ಕಳನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ ಮಾಸ್ಕ್, ಸ್ಯಾನಿಟೈಸರ್ ನೀಡಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. 244ರ ಪೈಕಿ 228 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 16 ಮಕ್ಕಳು ಗೈರಾಗಿದ್ದರು ಎಂದು ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಡಿ.ಸಿ.ಬೊಮ್ಮನಗೌಡ್ರ ತಿಳಿಸಿದರು.
ಕರೊನಾ ಭಯದಿಂದ ಯಾರೊಬ್ಬರೊಂದಿಗೂ ಕೂಡಿಕೊಂಡು ಅಭ್ಯಾಸ ಮಾಡಲಿಲ್ಲ. ಆನ್ಲೈನ್, ರೇಡಿಯೋ, ಯುಟ್ಯೂಬ್ ಮುಖೇನ ಪಾಠಗಳನ್ನು ಕೇಳಿದ್ದೆವು. ಪರೀಕ್ಷೆಗೆ ಹಾಜರಾಗಲು ಸ್ವಲ್ಪ ತಳಮಳ ಆರಂಭಗೊಂಡಿತ್ತು. ಆದರೆ, ಶಿಕ್ಷಕರ ಮಾರ್ಗದರ್ಶನ, ಸಹಕಾರದಿಂದ ಪರೀಕ್ಷೆ ಭಯ ಮಾಯವಾಯಿತು.| ಚಂದ್ರಗೌಡ ಪಾಟೀಲ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ