

ಆಳಂದ: ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿಯಲು ಹೈದರಾಬಾದ್‌ನ ನಿಜಾಮನ ಆಳ್ವಿಕೆಯೇ ಕಾರಣ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಪಟ್ಟಣದ ಆರ್ಯ ಸಮಾಜ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ನೆನಪಿಗಾಗಿ ಹೊರತಂದ ವೀರಗಾಥೆ ಸಾಕ್ಷಿ ಚಿತ್ರ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಮೋಚನಾ ಚಳವಳಿಯಲ್ಲಿ ಆರ್ಯ ಸಮಾಜದ ಪಾತ್ರ ಅತ್ಯಂತ ಮಹತ್ವವಾದುದು. ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಜನರನ್ನು ಸಂಘಟಿಸಿ ದಾಸ್ಯದ ವಿರುದ್ಧ ಹೋರಾಡಲು ಕರೆ ನೀಡಿದ್ದರು. ಅಲ್ಲದೇ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ತೋರಿದ್ದರು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮಾತನಾಡಿ, ನಿಜಾಮರ ಆಳ್ವಿಕೆಯಿಂದ ಈ ಭಾಗದ ಜನರ ಮೇಲೆ ಅನೇಕ ರೀತಿಯ ದೌರ್ಜನ್ಯಗಳಾಗಿವೆ. ಕಾಸಿಂ ರಜ್ವೀ ಅನೇಕ ಹಿಂದುಗಳ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದಾನೆ. ಒಬ್ಬ ಕ್ರೂರ, ಮತಾಂಧನಾಗಿದ್ದನು. ಈ ಭಾಗದಲ್ಲಿ ಎ.ವಿ.ಪಾಟೀಲ್, ಗುರು ಭೀಮರಾವ ಪಾಟೀಲ್, ದಿಗಂಬರ್ ಕಲ್ಮಣಕರ ಸೇರಿ ಅನೇಕ ಹೋರಾಟಗಾರರು ಅಲ್ಲಲ್ಲಿ ಶಿಬಿರಗಳನ್ನು ನಡೆಸಿ ಮುಂದಾಳತ್ವ ವಹಿಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಚಾಣಾಕ್ಷತೆಯ ಕಾರ್ಯಾಚರಣೆಯಿಂದ ಈ ಭಾಗ ವಿಮೋಚನೆಯಾಯಿತು ಎಂದರು.
ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ರೋಹಿಣಾಕ್ಷ ಶಿರ್ಲಾಲು, ಡಾ.ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಚವ್ಹಾಣಶೆಟ್ಟಿ, ಮುರಳೀಧರ ಎಕಲೂರಕರ, ಸಾಯಬಣ್ಣ ಘೋಡಕೆ, ವಾಸುದೇವ ಕುಲಕರ್ಣಿ, ಜಿಪಂ ಮಾಜಿ ಸದಸ್ಯ ಮಲ್ಲಿನಾಥ ಪಾಟೀಲ್ ಮದಗುಣಕಿ, ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ್ ಕೊರಳ್ಳಿ, ಸಂತೋಷ ಹಾದಿಮನಿ, ಆರ್ಯ ಸಮಾಜದ ಅಧ್ಯಕ್ಷ ರಾಮಕೃಷ್ಣ ಸುರೆ ಇದ್ದರು.
ಆಯೋಜಕ ಸಂಜಯ ಮಿಸ್ಕಿನ್ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಮಾನೆ ಸ್ವಾಗತಿಸಿದರು. ಸುಜ್ಞಾನಿ ಪೊದ್ದಾರ ವಂದಿಸಿದರು. ಸುನೀಲ ಹಿರೋಳಿಕರ ನಿರೂಪಣೆ ಮಾಡಿದರು.
ನಿಜಾಮರ ಆಳ್ವಿಕೆಯಲ್ಲಿ ಈ ಭಾಗದ ಹೋರಾಟಗಾರರು ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.