ನಿಜಶರಣ ಮಹಾಮಹಿಮ ಮಡಿವಾಳ ಮಾಚಯ್ಯ; ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಬಣ್ಣನೆ

1CBP1
Published on

ಚಿಕ್ಕಬಳ್ಳಾಪುರ: ವಚನ ಸಾಹಿತ್ಯಕ್ಕೆ ಮಡಿವಾಳ ಮಾಚಯ್ಯ ನೀಡಿದ ಕೊಡುಗೆ ಅಪಾರವಾದುದು ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಾತನಾಡಿದರು.

ನಿಜಶರಣ ಮಹಾಮಹಿಮ ಮಡಿವಾಳ ಮಾಚಯ್ಯ, ಸರಳ ಆಡುಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ್ದಾರೆ. ಜಾತಿ ಪದ್ಧತಿ, ಅಸ್ಪಶ್ಯತೆ ಸೇರಿ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದಲ್ಲದೇ ತ್ರಿಕರ್ಣ ಶುದ್ಧಿಗಳನ್ನು ಪಾಲಿಸುವ ಮೂಲಕ ಆತ್ಮ ಶುದ್ಧಿಯ ಮಾರ್ಗದರ್ಶನ ನೀಡಿದರು ಎಂದು ತಿಳಿಸಿದರು.

ವೇದಾಂತ, ಉಪನಿಷತ್ತುಗಳನ್ನು ಆಡು ನುಡಿಯಲ್ಲಿ ಜನರಿಗೆ ತಿಳಿಸುವ, ಆತ್ಮಸಾಕ್ಷತ್ಕಾರವೇ ದೇವರು ಎಂಬ ಸಂದೇಶದೊಂದಿಗೆ ಸಾಮಾಜಿಕ ಚಳವಳಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ ಮಡಿವಾಳ ಮಾಚಯ್ಯ, ಅನುಭೂತಿಗಳ ಕಾಯಕನಿಷ್ಠ್ಠೆ, ಶ್ರದ್ಧೆ ಬಿಂಬಿಸುವ ವಚನಗಳ ಅರ್ಥ ಗ್ರಹಿಸಬೇಕು. ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಡಿವಾಳ ಮಾಚಯ್ಯ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಸಮುದಾಯದವರೂ ಜಾತ್ಯತೀತವಾಗಿ ಆಚರಿಸುವ ಮೂಲಕ ಒಳ್ಳೆಯ ಸಂದೇಶವನ್ನು ಸಾರಬೇಕು ಎಂದರು.

12ನೇ ಶತಮಾನದಲ್ಲಿ ಜ್ಞಾನವನ್ನು ಪ್ರಸರಿಸಿದವರಲ್ಲಿ ಅಂಬಿಗರಚೌಡಯ್ಯ, ಬಸವಣ್ಣ, ಮಡಿವಾಳ ಮಾಚಿದೇವರು ಪ್ರಮುಖರು. ಇವರು ಸಮಾಜದಲ್ಲಿ ಜಾತಿಮತ, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಯ ವಿರುದ್ಧವೂ ಹೋರಾಟ ನಡೆಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಮಡಿವಾಳ ಮಾಚಯ್ಯ ಸಂಘದ ಜಿಲ್ಲಾಧ್ಯಕ್ಷೆ ಪದ್ಮಾವತಿ, ತಾಲೂಕು ಅಧ್ಯಕ್ಷ ಮುನಿನಾರಾಯಣಪ್ಪ, ಪದಾಧಿಕಾರಿ ಆರ್.ರಾಜಶೇಖರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net