

ಚಾಮರಾಜನಗರ: ತಾಲೂಕಿನ ನಿಜಲಿಂಗನಪುರ ಗ್ರಾಮದಲ್ಲಿ ತಾಲೂಕಿನ ಹರದನಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದತ್ತು ಗ್ರಾಮ ಯೋಜನೆಯಡಿ ಹುರುಳಿ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆ, ಕ್ಷೇತ್ರೋತ್ಸವ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಕೃಷಿ ಅಧಿಕಾರಿ ಮಹದೇವಪ್ರಸಾದ್ ಉದ್ಘಾಟಿಸಿ ಮಾತನಾಡಿ, ರಾಗಿ ಅಥವಾ ಮುಸುಕಿನಜೋಳದ ನಂತರ ಹಿಂಗಾರಿನಲ್ಲಿ ಹುರುಳಿ ಬೆಳೆಯುವುದರಿಂದ ಮಣ್ಣಿನ ನಿರ್ವಹಣೆ ಉತ್ತಮಗೊಳ್ಳುವುದು ಎಂದು ತಿಳಿಸಿದರು. ಬೀಜೋಪಚಾರವನ್ನು ಕಡ್ಡಾಯವಾಗಿ ಮಾಡಬೇಕು. ಏಕದಳ ಬೆಳೆಯ ನಂತರ ದ್ವಿದಳ ಬೆಳೆ ಬೆಳೆಯುವುದರಿಂದ ಹಲವು ಸಸ್ಯ ಕೀಟ ಪೀಡೆಗಳು ಮತ್ತು ರೋಗಾಣುಗಳಿಗೆ ಧಕ್ಕೆಯುಂಟಾಗಿ, ಅವುಗಳ ಜೀವನ ಚಕ್ರ ಅಪೂರ್ಣಗೊಂಡು, ಅವುಗಳ ನಿರ್ವಹಣೆಯಾಗುವುದು ಮತ್ತು ಬೆಳೆಗಳ ಇಳುವರಿ ಹೆಚ್ಚುವುದು ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞ ಎಚ್.ಪಿ.ರಜತ್ ಮಾತನಾಡಿ, ಹವಾಮಾನ ಆಧಾರಿತ ಮುನ್ಸೂಚನೆಗಳ ಮಾಹಿತಿಯ ಮಹತ್ವ ಮತ್ತು ಕೃಷಿಯಲ್ಲಿ ಅವುಗಳ ಅಳವಡಿಕೆ ಕುರಿತು ಮಾಹಿತಿ ನೀಡುವುದರ ಜತೆಗೆ ಹುರುಳಿ ಬೆಳೆಯ ಸಮಗ್ರ ನಿರ್ವಹಣೆಯ ಮಾಹಿತಿ ಒದಗಿಸಿದರು. ಹೂವಿನ ಹಂತದಲ್ಲಿ ನಿರಂತರವಾಗಿ ಮಳೆಯಾಗುವುದರಿಂದ ಸೊಪ್ಪು ಹೆಚ್ಚಾಗಿ ಕಾಯಿಗಳ ಸಂಖ್ಯೆ ಕಡಿಮೆಯಾಗುವುದು. ಆದ್ದರಿಂದ ರೈತರು ಸಾಲಿನಲ್ಲಿ ಬಿತ್ತನೆ ಮಾಡಿದರೆ ಹೆಚ್ಚಿನ ತೇವಾಂಶದ ಪ್ರತಿಕೂಲ ಪರಿಣಾಮ ಕ್ಷೀಣಿಸಿ, ಉತ್ತಮ ಗಾಳಿಯಾಡುವಿಕೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್ ಮಾತನಾಡಿ, ಪಿ.ಎಚ್.ಜಿ.9 ಹುರುಳಿ ತಳಿಯು 100ರಿಂದ 105 ದಿನಗಳಿಗೆ ಕಟಾವಿಗೆ ಬರುವುದು ಮತ್ತು ಹಳದಿ ನಂಜುರೋಗಕ್ಕೆ ಸಹಿಷ್ಣುತೆ ಹೊಂದಿದೆ ಎಂದರು. ಪ್ರಗತಿಪರ ರೈತರಾದ ಮಲ್ಲಿಕಾರ್ಜುನಪ್ಪ, ಶೇಖರಪ್ಪ, ಕೆಂಚಶೆಟ್ಟಿ, ಶಂಕರ್‌ಗುರು, ಕ್ಷೇತ್ರ ಪರಿವೀಕ್ಷಕ ಎಸ್.ಮಂಜು ಇದ್ದರು.