ನಿಗೂಢ ಸಾವಿನ ಪ್ರಕರಣ ತನಿಖೆಯಾಗಲಿ

16mdkm2
Published on

ಮಡಿಕೇರಿ: ಗುಂಡಿಕೆರೆಯ ಎಂ.ಎಂ.ಮೂಸ ನಿಗೂಢ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಪೊಲೀಸ್ ಇಲಾಖೆಯನ್ನು ಆಗ್ರಹಿಸಿತು.

ಡಿಸಿಸಿ ಅಧ್ಯಕ್ಷ ಕೆ.ಕೆ.ಮಂಜುನಾಥ್‌ಕುಮಾರ್ ನೇತೃತ್ವದ ನಿಯೋಗ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿತು.

ಏಪ್ರಿಲ್ 7ರಂದು ಎತ್ತು ಖರೀದಿಸಲೆಂದು ಮನೆಯಿಂದ ತೆರಳಿದ ಮೂಸ ಮನೆಗೆ ಮರಳಿ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದರು. 5 ದಿನ ಬಳಿಕ ಕೊಳತೋಡು ಗ್ರಾಮದ ಕಾಫಿ ತೋಟದಂಚಿನ ಮರವೊಂದರ ಕೆಳಗೆ ಶವವಾಗಿ ಪತ್ತೆಯಾಗಿದ್ದರು. ಈ ನಿಗೂಢ ಸಾವಿನ ಬಗ್ಗೆ ಅವರ ಮನೆಯವರಿಗೆ ಅನುಮಾನವಿದೆ ಎಂದು ಮಂಜುನಾಥ್ ಕುಮಾರ್ ಎಸ್ಪಿ ಗಮನ ಸೆಳೆದರು.

ಮೂಸ ಕಾಣೆಯಾದ ಬಗ್ಗೆ ಏ.8ರಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಸಬ್‌ಇನ್ಸ್‌ಪೆಕ್ಟರ್ ಮರಿಸ್ವಾಮಿ ಪ್ರಕರಣ ಕುರಿತು ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಅವರು ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ. ಕಾಣೆಯಾಗಿದ್ದ ಮೂಸ ಹುಡುಕುವ ವಿಚಾರದಲ್ಲಿ ಏ.10 ರಂದು ಬಾಳುಗೋಡಿನಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣದಲ್ಲಿಯೂ ಮರಿಸ್ವಾಮಿ ಬೇಜವಾಬ್ದಾರಿ ತೋರಿದ್ದಾರೆ ಎಂದು ದೂರಿದರು.

ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾತನಾಡಿ, ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಮರಣೋತ್ತರ ಪರೀಕ್ಷೆಯ ಎಫ್‌ಎಸ್‌ಎಲ್ ವರದಿ ಬಂದ ಕೂಡಲೇ ಅದನ್ನು ಸಮಗ್ರವಾಗಿ ಪರಿಶೀಲಿಸಿ ತನಿಖೆ ಮುಂದುವರಿಸಲಾಗುವುದು. ಎಫ್‌ಎಸ್‌ಎಲ್ ವರದಿಯಲ್ಲಿ ಸಾವಿನ ಬಗ್ಗೆ ಅನುಮಾನಗಳಿರುವ ಅಂಶಗಳಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಕುಟುಂಬಕ್ಕೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಎಸ್ಪಿ ಭರವಸೆ ನೀಡಿದರು.

ನಿಯೋಗದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬ್ದುಲ್ ರಹಿಮಾನ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಅಧ್ಯಕ್ಷ ಎಂ.ಎ.ಉಸ್ಮಾನ್, ಕೆಪಿಸಿಸಿ ಕಾರ್ಮಿಕ ಘಟಕ ಕಾರ್ಯದರ್ಶಿ ಅಜ್ಜಳ್ಳಿ ರವಿ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಅಧ್ಯಕ್ಷ ಸೂರಜ್ ಹೊಸೂರು, ಮೂಸ ಅವರ ಪುತ್ರ ಎಂ.ಎಂ.ಸಲಾಂ, ಸಹೋದರ ಎಂ.ಎಂ.ಸಾದಲಿ, ಕೆದಮುಳ್ಳೂರು ಗ್ರಾಪಂ ಸದಸ್ಯ ಎಂ. ಎಂ.ಇಸ್ಮಾಯಿಲ್, ಬೇಟೋಳಿ ಗ್ರಾಪಂ ಸದಸ್ಯ ಕೆ.ಎಂ.ಫಾರೂಕ್, ಮಾಜಿ ಉಪಾಧ್ಯಕ್ಷ ಎಂ.ಎ.ಮೊಯ್ದು, ಗುಂಡಿಕೆರೆಯ ಪ್ರಮುಖರಾದ ಲಿಯಾಕತ್ ಆಲಿ, ಉಮ್ಮರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net