ನಿಗಮದ ಹಣ ಕಾಂಗ್ರೆಸ್ ಹೈಕ್‌ಮಾಂಡ್‌ಗೆ ತಲುಪಿದೆ

Published on

ಬಳ್ಳಾರಿ : ರಾಜ್ಯದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಕಾಂಗ್ರೆಸ್ ಹೈಕಮಾಂಡ್‌ಗೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಸಂಡೂರಿನ ವ್ಯಾಲಿ ರೆಸಾರ್ಟ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಾಲ್ಮೀಕಿ ಹಗರಣದ ಹಣದಿಂದ ರಾಜ್ಯದ ಕಾಂಗ್ರೆಸ್ ಸಂಸದರು ಹಣ, ಹೆಂಡಾ ಹಂಚಿ ಗೆಲವು ಸಾಧಿಸಿದ್ದಾರೆ. ಅಲ್ಲದೇ, ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾಗಿದೆ. ಸರ್ಕಾರ ನಿಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮವಹಿಸಬೇಕು. ರಾಜ್ಯ ಸರ್ಕಾರ ಆರಂಭದಲ್ಲಿ ವಾಲ್ಮೀಕಿ ಹಗರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿತ್ತು. ಆದರೆ, ಎರಡು ತಿಂಗಳ ತನಿಖೆಯಲ್ಲಿ ಸಚಿವ, ಶಾಸಕರಿಗೆ ಒಂದು ನೋಟಿಸ್ ನೀಡಿಲ್ಲ. ಕೇವಲ ಅಧಿಕಾರಿಗಳನ್ನು ತನಿಖೆ ನಡೆಸಿದರು. ಕೇಂದ್ರ ಇಡಿ ಸಂಸ್ಥೆ ಪ್ರಕರಣ ದಾಖಿಲಿಸಿಕೊಂಡ ಕೂಡಲೇ, ನಾಗೇಂದ್ರ ಸಚಿವ ಸ್ಥಾನದಿಂದ ರಾಜೀನಾಮೆ ನೀಡಿದರು. ಶಾಸಕ ಬಸವನಗೌಡ ದದ್ದಲ್‌ಗೆ ಎಸ್‌ಐಟಿ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿತು. ಹಗರಣದಲ್ಲಿ ನಾಗೇಂದ್ರ ಭಯಬಿಟ್ಟರೆ ಸಿಎಂ ಹಾಗೂ ಡಿಸಿಎಂ ಸ್ಥಾನಕ್ಕೆ ಕುತ್ತು ಬರುತ್ತಿದೆ ಎಂಬ ಭಯ ಇಬ್ಬರ ನಾಯಕರಿಗೂ ಇದೆ. ಇತ್ತೀಚೆಗೆ ನಡೆದ ಸಿಎಲ್‌ಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಶಾಸಕರ ರಕ್ಷಣೆ ಕೋರಿದ್ದರಿಂದ ಸದನದಲ್ಲಿ ಕಾಂಗ್ರೆಸ್ ಶಾಸಕರು ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಿ ಮೃತ ಚಂದ್ರಶೇಖರ ಮನೆಯಲ್ಲಿ ಡೆತ್‌ನೋಟ್ ಸಿಗಲಿಲ್ಲ ಅಂದರೆ, ಈ ಪ್ರಕರಣ ಬಯಲಿಗೆ ಬರುತ್ತಿರಿಲಿಲ್ಲ ಎಂದು ಡೆತ್ ನೋಟ್ ಪ್ರದರ್ಶಿಸಿದರು. ನಾಗೇಂದ್ರ ಅನುಭವಿ ರಾಜಕಾರಣಿ, ಸಿಎಂ ಕಟ್ಟಾಳು ಆಗಿದ್ದಾರೆ. ವಿವಿಧ ಹಗರಣದಲ್ಲಿ ಭಾಗಿಯಾಗಿರುವ ಆರೋಪಿ ಸತ್ಯನಾರಯಣ ರಾವ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೆ, ಇಂತಹ ಹಗರಣ ಮಾಡುವಲ್ಲಿ ಎಕ್ಸ್‌ರ್ಫಟ್ ಅಂತ ಟೀಕಿಸಿದರು. ಇನ್ನೂ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದ ದೇವೆಂದ್ರಪ್ಪ, ಮುಖಂಡರಾದ ಕೆ.ಎಸ್.ದಿವಾಕರ್, ಮಲ್ಲೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net