

ಚಿತ್ರದುರ್ಗ: ಮಾದಿಗ ಮಹಿಳೆ ಎಂಬ ಕಾರಣಕ್ಕೆ ಸವಿತಾ ರಘು, ಪಿ.ರಘು ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಮಾದಿಗ ಮಹಾಸಭಾ ಅಧ್ಯಕ್ಷ ಹನುಮಂತಪ್ಪ ದುರ್ಗ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸವಿತಾ ಅವರಿಗೆ ನಿಗಮ-ಮಂಡಳಿ ಸ್ಥಾನ ದೊರೆಯುವ ವಿಚಾರ ತಿಳಿದ ಕೂಡಲೇ ಕೆಲ ಕಾಂಗ್ರೆಸ್ಸಿಗರೇ ಸುಳ್ಳು ಆರೋಪ ಮಾಡಲು ಮುಂದಾಗಿದ್ದಾರೆ. ಇದು ಸತ್ಯಕ್ಕೆ ದೂರ ಎಂದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಸವಿತಾ ಕಾರಣ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬುದಾಗಿ ಎನ್‌ಎಸ್‌ಯುಐ ಮಾಜಿ ಅಧ್ಯಕ್ಷ ವಿನಯ್ ಗೋಡೆಮನೆ ಆರೋಪಿಸಲು ಅರ್ಹರಲ್ಲ. ಅವರ ಮೂಲಕ ಕೆಲ ಮುಖಂಡರ ಕುತಂತ್ರವಿದು ಎಂದು ದೂರಿದರು.
ಹಲವು ಬಾರಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದೆ. ಯಾರದೋ ಸೋಲಿಗೆ, ಇನ್ಯಾರನ್ನೋ ಹೊಣೆಯಾಗಿಸುವುದು ಸರಿಯಲ್ಲ. ಆಧಾರ ರಹಿತ ಆರೋಪ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಇಲ್ಲದಿದ್ದರೆ, ಮಾದಿಗ ಮಹಾಸಭಾದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಕೆ.ಟಿ.ಶಿವಕುಮಾರ್, ವೆಂಕಟೇಶ್, ಕುಮಾರ್ ಹೊಳಲ್ಕೆರೆ, ರಾಜಣ್ಣ ಇತರರಿದ್ದರು.