ನಿಗಮ ಮಂಡಳಿಗಳಿಗೆ ಸೂಕ್ತರ ಆಯ್ಕೆ

Congress
Published on

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮವೂ ಕಾರಣ. ಹೀಗಾಗಿ ನಿಗಮ ಮಂಡಳಿಗಳಿಗೆ ನಿಷ್ಠಾವಂತರನ್ನು ಆಯ್ಕೆ ಮಾಡಲು ಪಕ್ಷ ತೀರ್ಮಾನಿಸಲಿದೆ ಎಂದು ಎಐಸಿಸಿ ಮುಖಂಡ ಮಯೂರ ಜಯಕುಮಾರ್ ಭರವಸೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ರಾಜ್ಯದ ವಿವಿಧ ನಿಗಮ ಮಂಡಳಿಗಳಲ್ಲಿನ ಹುದ್ದೆ ಭರ್ತಿ ಮಾಡಲು ಹತ್ತು ದಿನದೊಳಗೆ ಕಾರ್ಯಕರ್ತರ ಪಟ್ಟಿ ತಯಾರಿಸಿ, ಕೆಪಿಸಿಸಿಗೆ ಕಳುಹಿಸಬೇಕು. ಅಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ಹೀಗಾಗಿ ಜಿಲ್ಲಾ ಸಮಿತಿಗೆ ಇದರ ಜವಾಬ್ದಾರಿ ನೀಡಲಾಗಿದೆ ಎಂದರು.

ಬಿಜೆಪಿ ಮತದಾರರಿಗೆ ನೀಡಿದ ಆಶ್ವಾಸನೆ ಈಡೇರಿಸದ ಕಾರಣ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿ ಅಧಿಕಾರ ಪಡೆದಿದೆ. ಲೋಕಸಭಾ ಚುನಾವಣೆಯಲ್ಲೂ ಅಭೂತಪೂರ್ವ ಜಯ ಸಾಧಿಸಲು ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾಗಬೇಕು. ಅಲ್ಲದೆ, 5 ಗ್ಯಾರಂಟಿ ಈಡೇರಿಸಿದ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಿ ಎಂದು ಸಲಹೆ ನೀಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ರಾಜ್ಯ ವಕ್ತಾರ ಡಿ.ಬಸವರಾಜು, ಮುಖಂಡರಾದ ಹಾಲಸ್ವಾಮಿ, ನೇರ್ಲಗುಂಟೆ ರಾಮಪ್ಪ, ಕುಮಾರಗೌಡ, ಸಂಪತ್‌ಕುಮಾರ್, ಮೈಲಾರಪ್ಪ, ಪ್ರಸನ್ನಕುಮಾರ್, ಅಂಜಿನಪ್ಪ, ಮುದಸಿರ್, ಕಾರೇಹಳ್ಳಿ ಉಲ್ಲಾಸ್, ವೆಂಕಟೇಶ್, ಲಕ್ಷ್ಮಿಕಾಂತ, ಚೋಟು, ಮೋಕ್ಷಾ ರುದ್ರಸ್ವಾಮಿ, ಮೂಡಲಗಿರಿಯಪ್ಪ, ಅಶ್ವಕ್ ಆಲಿ, ಎನ್‌.ಡಿ.ಕುಮಾರ್‌ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net