

ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಕಳುಹಿಸಿದ ೧೪ ದಿನಗಳ ಒಳಗಾಗಿ ಕಬ್ಬಿನ ಬೆಲೆ ಸಂಪೂರ್ಣವಾಗಿ ಸಂದಾಯ ಮಾಡತಕ್ಕದ್ದು, ವಿಳಂಬ ದೋರಣೆ ಅನುಸರಿಸಿದಲ್ಲಿ ವಾರ್ಷಿಕ ಶೇ.೧೫ ರಷ್ಟು ಬಡ್ಡಿಯೊಂದಿಗೆ ಅಸಲನ್ನು ಪಾವತಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದ ನಿರ್ದೇಶನದಂತೆ ಕಬ್ಬು ಕಟಾವು ಮತ್ತು ಸಾಗಾಣಿಕೆ (ಎಚ್-ಟಿ) ಕಡಿತ ಮಾಡುವುದನ್ನು ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸೂಚನಾ ಫಲಕದಲ್ಲಿ ಪ್ರಕಟಿಸಲು ಸೂಚಿಸಿದರು. ರೈತರ ಕಬ್ಬನ್ನು ಹಿರಿತನದ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿ, ಕಾರ್ಖಾನೆಯ ಸೂಚನಾ ಫಲಕಕ್ಕೆ ಲಗತ್ತಿಸಿ, ಹಿರಿತನದ ಆಧಾರದಲ್ಲಿಯೇ ಕಬ್ಬನ್ನು ರೈತರಿಂದ ಪಡೆಯುಲು ತಿಳಿಸಿದರು.
ಕಳೆದ ಸಾಲಿನಲ್ಲಿ ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳು ರೈತರಿಂದ ಅನಽಕೃತವಾಗಿ ಒತ್ತಾಯ ಪೂರ್ವಕವಾಗಿ ಹಣ ನೀಡಿದ್ದಲ್ಲಿ ಮಾತ್ರ ಕಬ್ಬು ಕಟಾವು ಮಾಡುವುದಾಗಿ ರೈತರಿಗೆ ಬೇಡಿಕೆ ಇಟ್ಟ ಪ್ರಸಂಗಗಳು ಸಂಭವಿಸಿದ್ದು, ಅಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು. ರೈತರು ಕಾರ್ಖಾನೆಗೆ ಭೇಟಿ ನೀಡಿದಾಗ ಸೌಜನ್ಯದಿಂದ ವರ್ತಿಸಿ ಅವರ ಸಂದೇಹ ಪರಿಹಾರ ಮಾಡಿ, ಅವಶ್ಯವಿದ್ದಲ್ಲಿ ಮಾಹಿತಿಯನ್ನು ನೀಡಬೇಕು. ತೂಕದ ಯಂತ್ರಗಳನ್ನು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ತಪಾಸಣೆ ಮಾಡಿಸಿ, ಅದರ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಅಳವಡಿಸುವದಲ್ಲದೇ ಪ್ರತಿದಿನದ ಇಳುವರಿ, ಎಫ್‌ಆರ್‌ಪಿ ದರ, ಎಚ್-ಟಿ ಕಡಿತದ ಮೊತ್ತ ಇವುಗಳನ್ನು ಕಡ್ಡಾಯವಾಗಿ ಕಾರ್ಖಾನೆಯ ಸೂಚನಾ ಫಲಕದಲ್ಲಿ ಅಳವಡಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವ ಮುಂಚೆಯೆ ಎಲ್ಲಾ ಸಕ್ಕರೆ ಕಾರ್ಖಾನೆಗಳ ಸತ್ಯಾಪನೆಯನ್ನು ಮಾಡಿ, ಎಲ್ಲಾ ಸಕ್ಕರೆ ಕಾರ್ಖಾನೆಗಳ ತೂಕದ ಯಂತ್ರಗಳನ್ನು ರೈತರ ಸಮ್ಮುಖದಲ್ಲಿ ಪರಿಶೀಲನೆ ಮಾಡಿ ಸರಿಯಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಕಾನೂನುಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ, ರೈತರಿಂದ ತೂಕದ ಯಂತ್ರಗಳ ಬಗ್ಗೆ ಯಾವುದೇ ದೂರುಗಳು ಸ್ವೀಕೃತವಾದ ೪ ಗಂಟೆಗಳಲ್ಲಿಯೇ ಸಂಬಂಧಿಸಿದ ಕಾರ್ಖಾನೆಗೆ ಭೇಟಿ ನೀಡಿ ರೈತರ ಸಮ್ಮುಖದಲ್ಲಿ ಪರಿಶೀಲಿಸಿ ಸರಿಪಡಿಸಲು ತಿಳಿಸಿದರು.
ಅ.೧೫ ರಂದು ಬೆಂಗಳೂರಿನಲ್ಲಿ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರ ನಿರ್ದೇಶಕರು ಹಾಗೂ ರೈತ ಮುಖಂಡರ ಸಭೆ ಜರುಗಲಿದ್ದು, ಸಭೆಯ ನಿರ್ಣಯಗಳನ್ನು ಆಧರಿಸಿ, ಮತ್ತೊಮ್ಮೆ ಸಭೆಯನ್ನು ಅ.೧೯ ರಂದು ಪ್ರತಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಇಬ್ಬರು ರೈತ ಮುಖಂಡರೊಂದಿಗೆ ಸಭೆ ಜರುಗಿಸಿ, ಮುಂದಿನ ಕ್ರಮಗಳ ಬಗ್ಗೆ ಕಾರ್ಖಾನೆಯವರಿಗೆ ತಿಳಿಸಲಾಗುವುದು ಹೇಳಿದರು.
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ ಮಾತನಾಡಿ, ಕಬ್ಬು ಸರಬರಾಜು ಮಾಡುವ ಟ್ರ‍್ಯಾಕ್ಟರ್, ಚಕ್ಕಡಿ ಮತ್ತು ಇತರೆ ವಾಹನಗಳ ಹಿಂದುಗಡೆ ರೇಡಿಯಮ್ ಅಂಟಿಸುವುದು ಹಾಗೂ ಬೇರೆ ಕಡೆಯಿಂದ ಕಬ್ಬು ಕಟಾವು ಮಾಡಲು ಬಂದ ತಂಡಗಳ ಹೆಸರು, ವಿಳಾಸ ಇತ್ಯಾದಿ ವಿವರಗಳ ಬಗ್ಗೆ ಒಂದು ಪ್ರತ್ಯೇಕ ರೆಜಿಸ್ಟರ್ ನಿರ್ವಹಣೆ ಮಾಡಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಬೇಕು. ಟ್ರಾಫಿಕ್ ಜಾಮ್ ಆಗದಂತೆ ವಾಹನಗಳನ್ನು ಒಯ್ಯಲು ತಮ್ಮ ಅಧೀನದಲ್ಲಿರುವ ಚಾಲಕರುಗಳಿಗೆ ಸೂಚನೆ ನೀಡಲು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸಿ.ಚಿ.ಕೊಡ್ಲಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪಾನಿಶೆಟ್ಟರ, ಆಹಾರ ಇಲಾಖೆಯ ಲೆಕ್ಕ ಅಧೀಕ್ಷಕ ಆರ್.ಎಸ್.ಚೌದರಿ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಯ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.