ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯಬೇಕು : ಶಿಕ್ಷಣ ಸಂಯೋಜಕ ಕಿರಣ್‌ಕುಮಾರ್ ಸೂಚನೆ

26 HANUR 1
Published on


ಚಾಮರಾಜನಗರ : ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರವೇಶಾತಿಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ಪಡೆಯಬೇಕು. ಇದರ ವಿವರವನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಹಾಕಬೇಕು ಎಂದು ಶಿಕ್ಷಣ ಸಂಯೋಜಕ ಕಿರಣ್‌ಕುಮಾರ್ ಸೂಚಿಸಿದರು.


ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶೈಕ್ಷಣಿಕ ಮಾರ್ಗದರ್ಶಿ ಅನುಷ್ಠಾನದ ಸಂಬಂಧ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಹನೂರು ಪಟ್ಟಣದ ಬಿಆರ್‌ಸಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ಧ ಪೂರ್ವ ಸಭೆಯಲ್ಲಿ ಮಾತನಾಡಿದರು.


ಕಳೆದ ಎರಡನೇ ವರ್ಷದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬೋಧನಾ ಕಲಿಕೆ ಪ್ರಕ್ರಿಯೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ದಿಸೆಯಲ್ಲಿ ಸರ್ಕಾರ 2022-23ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಲಾಗಿತ್ತು ಎಂದರು.


ಇದೀಗ 2023-24ನೇ ಸಾಲನ್ನು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಘೋಷಿಸಲಾಗಿದೆ. ಆದ್ದರಿಂದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಯನ್ನು ಉಂಟು ಮಾಡಲು ಸರ್ಕಾರದ ಮಾರ್ಗಸೂಚಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಈ ದಿಸೆಯಲ್ಲಿ ಶಾಲಾ ಪ್ರಾರಂಭದ ದಿನದಿಂದ ಜೂ.15 ರವರೆಗೆ ಸೇತುಬಂಧ ಕಾರ್ಯಕ್ರಮವನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು.


8ನೇ ತರಗತಿಗೆ ಮೌಲ್ಯಂಕನವಿದ್ದು, 40:60 ಅನುಪಾತವಿರುತ್ತದೆ. ಇನ್ನು ಶಾಲೆಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರತಿ ವಿದ್ಯಾರ್ಥಿಯು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಪ್ರತಿ 2 ಮತ್ತು 4ನೇ ಶನಿವಾರ ಶಾಲೆಗಳಲ್ಲಿ ಪಠ್ಯಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಯನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.


ಕಳೆದ 2 ವರ್ಷದ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿರುವುದಕ್ಕಿಂತ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕವನ್ನು ಪಡೆಯಲಾಗುತ್ತಿತ್ತು. ಈ ಬಗ್ಗೆ ಪಾಲಕರು ಹಾಗೂ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿತ್ತು. ಆದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.


ನಿಗದಿಪಡಿಸಿರುವ ಶುಲ್ಕದ ವಿವರವನ್ನು ಸೂಚನಾ ಫಲಕ ಹಾಗೂ ಶಾಲೆಯ ಮುಂಭಾಗದಲ್ಲಿ ಫ್ಲೆಕ್ಸ್ ಅಳವಡಿಸಬೇಕು. ಶುಲ್ಕದ ವಿವರದ ಮಾಹಿತಿಯನ್ನು 2 ಜೆರಾಕ್ಸ್ ಪ್ರತಿಯೊಂದಿಗೆ ಡಿಡಿಪಿಐ ಹಾಗೂ ಬಿಇಒ ಕಚೇರಿಗೆ ಸಲ್ಲಿಸಬೇಕು. ಈ ಮೂಲಕ ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ತಿಳಿಸಿದರು.


ಒಂದು ವೇಳೆ ಪಾಲಕರಿಂದ ದೂರುಗಳು ಬಂದಲ್ಲಿ ಸಂಸ್ಥೆಯ ಮಾನ್ಯತೆ ರದ್ದು ಮಾಡುವ ಅವಕಾಶ ಇರುತ್ತದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಇನ್ನು ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸುವ ಸಂಬಂಧ ಸರ್ಕಾರ ಆದೇಶಿಸಿದೆ. ಹಾಗಾಗಿ ಶಿಕ್ಷಕರ ಅವಶ್ಯಕತೆಯ ಬಗ್ಗೆ ಕಚೇರಿಗೆ ಮಾಹಿತಿ ನೀಡಬೇಕು. ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ದೈಹಿಕ ಶಿಕ್ಷಕ ಸಂಯೋಜಕ ಮಹದೇವ, ಶಿಕ್ಷಣ ಸಂಯೋಜಕ ಕಂದವೇಲು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಸಿಅರ್‌ಪಿ ದೇವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net