

ರಾಯಬಾಗ: ಸಾರಿಗೆ ಘಟಕದ ಬಸ್ ಸರಿಯಾದ ಸಮಯಕ್ಕೆ ಬಿಡುವಂತೆ ಎಂದು ಆಗ್ರಹಿಸಿ ರಾಯಬಾಗ ತಾಲೂಕಿನ ಬಾವಚಿ ಗ್ರಾಮದ ವಿದ್ಯಾರ್ಥಿಗಳು ಶುಕ್ರವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕಾಲೇಜು ಹಾಗೂ ಶಾಲೆಗೆ ಹೋಗುವ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವ ಕಾರಣ ತರಗತಿಗಳು ತಪ್ಪುತ್ತಿವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಂಕೇಶ್ವರ-ರಾಯಬಾಗ ಬಸ್ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 7:30ಕ್ಕೆ ಕಾಲೇಜ್ ಪ್ರಾರಂಭವಾಗುವುದು. ಆದರೆ, ಬಸ್ 9 ಗಂಟೆ ಆದರೂ ಬರುವುದಿಲ್ಲ. ನಿಗದಿತ ಸಮಯಕ್ಕೆ ಬಸ್ ಬಿಡುವಂತೆ ಸಾಕಷ್ಟು ಬಾರಿ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಈವರೆಗೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ನಂತರ ಸ್ಥಳಕ್ಕೆ ಆಗಮಿಸಿದ ಸಾರಿಗೆ ಘಟಕದ ಅಧಿಕಾರಿಗಳು, ಸರಿಯಾದ ಸಮಯಕ್ಕೆ ಬಸ್ ಬಿಡುವುದಾಗಿ ಭರವಸೆ ನೀಡಿದ ನಂತರ, ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಸುಪ್ರಿಯಾ ಚೌಗಲಾ, ಪಲ್ಲವಿ ನಾಯಿಕ, ಪ್ರೀತಿ ನಾಗರಾಳೆ, ಗೋದಾವರಿ ಪುಂಡಿಪಲ್ಲೆ, ಚೇತನ ನಾಯಿಕ, ರಾಜು ಪಾಟೀಲ, ಬಾಳೇಶ ಸನದಿ, ಶಿವರಂಜನ ನಾಯಿಕ, ವೆಕಂಟೇಶ ಐಹೊಳೆ, ಗ್ರಾಮಸ್ಥರಾದ ಸಾವಂತ ನಾಯಿಕ, ಮಾರುತಿ ನಾಯಿಕ, ಸುರೇಶ ನಾಯಿಕ, ಭೈರಪ್ಪ ನಾಯಿಕ, ಮಹೇಶ ಪಾಟೀಲ, ಬಾಳಪ್ಪ ನಾಯಿಕ, ಸಂಜು ಸನದಿ ಇತರರಿದ್ದರು.