

ಹುಲಸೂರು: ೨೦೨೨-೨೦೨೩ನೇ ಸಾಲಿನ ಆರ್‌ಐಡಿಎಫ್ ಯೋಜನೆಯಡಿ ೫೦.೯೫ ಲಕ್ಷ ರೂ. ವೆಚ್ಚದ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಿ ದೊರಕಿದ್ದು, ತ್ವರಿತವಾಗಿ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ಶರಣು ಸಲಗರ ಸೂಚನೆ ನೀಡಿದರು.
ಪಟ್ಟಣದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಗ್ರಾಪಂನ ಎಲ್ಲ ಸದಸ್ಯರು ಒಟ್ಟಾಗಿ ಕೆಲಸ ಮಾಡಿ, ಪಶು ವೈದ್ಯಕೀಯ ಸಂಕೀರ್ಣಕ್ಕೆ ಸಹಕಾರ ನೀಡಬೇಕು ಎಂದರು.
ತಾಲೂಕಿನಲ್ಲಿ ಹೈನುಗಾರಿಕೆ ಪ್ರಮುಖ ವೃತ್ತಿಯಾಗಿದ್ದು, ರಾಸುಗಳಿಗೆ ತೊಂದರೆ ಆದರೆ ಕುಟುಂಬದ ಆಧಾರವೇ ಕಳಚಿ ಬೀಳಲಿದೆ. ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಪಶು ಇಲಾಖೆ ನಿರ್ದೇಶಕ ನರಸಪ್ಪ ದೇವರಕೊಂಡ, ಸಂಜೀವಕುಮಾರ ಭುಸಾರೆ, ಪಿಡಿಒ ಸಂದೀಪ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಓಂಕಾರ ಪಟ್ನೆ, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಪ್ರಮುಖರಾದ ಅಶೋಕ ವಕಾರೆ, ಡಾ.ಆನಂದ ಪಾಟೀಲ್, ದೇವೇಂದ್ರ ಭೋಪಳೆ, ಜಗÀನ್ನಾಥ, ನಾಗೇಶ ಮೇತ್ರೆ, ರಣಜೀತ ಗಾಯಕವಾಡ, ಬಾಬುರಾವ ಲಕುಂಡೆ, ಸಿದ್ದರಾಮ ಪಾರಶೆಟ್ಟೆ, ಕೇದಾರ ಭೋಪಳೆ ಇತರರಿದ್ದರು.