

ರಾಯಬಾಗ: ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಗುಣಮಟ್ಟದ ಬೀಜ ಮತ್ತು ಗೊಬ್ಬರ ಸರಬರಾಜು ಮಾಡಬೇಕೆಂದು ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು.
ಪಟ್ಟಣದ ಡಾ.ಬಾಬು ಜಗಜೀವನರಾಂ ಸಭಾಭವನದಲ್ಲಿ ಕೃಷಿ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ, ಕೀಟನಾಶಕ ಮತ್ತು ಬೀಜ ಮಾರಾಟಗಾರರ ಹಾಗೂ ಪರವಾನಗಿದಾರರ ಸಭೆ ಉದ್ಘಾಟಿಸಿ ಮಾತನಾಡಿ, ಸರ್ಕಾರ ನಿಗದಿಪಡಿಸಿದ ದರಪಟ್ಟಿಯಲ್ಲಿ ರಸಗೊಬ್ಬರ ಮಾರಾಟ ಮಾಡಬೇಕು. ಕಳಪೆ ಬೀಜ, ರಸಗೊಬ್ಬರ ಮಾರಾಟ ಮಾಡುವ ಮತ್ತು ಅಕ್ರಮ ದಾಸ್ತಾನು ಮಾಡುವ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ ಮಾತನಾಡಿ, ರೈತರ ಬೇಡಿಕೆಗೆ ತಕ್ಕಂತೆ ಮಾರಾಟಗಾರರು ಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಭೂಮಿ ಹದ ಮಾಡಿ, ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿರುವುದರಿAದ ಅವರಿಗೆ ಅವಶ್ಯವಿರುವ ಬೀಜ ಮತ್ತು ರಸಗೊಬ್ಬರ ಒದಗಿಸಬೇಕು. ರೈತರಿಗೆ ಅವಧಿ ಮೀರಿದ ದಾಸ್ತಾನು ಮಾರಾಟ ಮಾಡಿದರೆ ಅಂಥವರ ಅಂಗಡಿ ಲೈಸನ್ಸ್ ರದ್ದು ಮಾಡುವುದಾಗಿ ಎಚ್ಚರಿಸಿದರು.
ಕೃಷಿ ಅಧಿಕಾರಿಗಳಾದ ಆರ್.ಎಸ್.ದತ್ತವಾಡೆ, ರಘುನಾಥ ಪಾಟೀಲ, ಮಾರಾಟಗಾರರ ಸಂಘದ ಅಧ್ಯಕ್ಷ ಶೀತಲ ಕೀರ್ತಿ, ಮಹೇಶ ಮುಗಳಖೋಡ, ಮಹಾದೇವ ಬೊರಗಾಂವೆ ಇದ್ದರು.