ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸಿ

08NGD1
ನಂಜನಗೂಡಿನ ತಾಲೂಕು ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಡಾ.ಎಂ.ಕೃಷ್ಣರಾಜು ಮಾತನಾಡಿದರು. ಇಒ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.
Published on

ನಂಜನಗೂಡು: ತಾಲೂಕು ಪಂಚಾಯಿತಿಗೆ 2023-24ನೇ ಸಾಲಿಗೆ 145.16 ಕೋಟಿ ರೂ. ಅನುದಾನ ಬಂದಿದ್ದು, ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ನಿಗದಿತ ಸಮಯದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ತಾಪಂ ಆಡಳಿತಾಧಿಕಾರಿ, ಜಿಪಂ ಉಪಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು ಸೂಚಿಸಿದರು.

ಎಲ್ಲ ಇಲಾಖೆಗಳ ಕ್ರಿಯಾಯೋಜನೆಗಳಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಲಾಗಿದೆ. ಕೆಲ ಯೋಜನೆಗಳ ಲಿಂಕ್ ದಾಖಲಾತಿಗಳಿಗೂ ಈ ಸಭೆಯಲ್ಲೇ ಅನುಮೋದನೆ ನೀಡಲಾಗಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಅನುದಾನ ಅಪವ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಹಿಸಲಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರ ವ್ಯಾಪ್ತಿಗೆ ತಾಲೂಕಿನ ಎರಡು ಹೋಬಳಿಗಳು ಸೇರುತ್ತವೆ. ಹಾಗಾಗಿ ಅಧಿಕಾರಿಗಳು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲೇ ಕೆಲಸಗಳು ವಿಳಂಬವಾದರೆ ಅಥವಾ ನಿಗದಿತ ಗುರಿ ತಲುಪದಿದ್ದರೆ ಕೆಟ್ಟ ಹೆಸರು ಬರಲಿದೆ. ಆದ್ದರಿಂದ ಕಳೆದ ವರ್ಷಗಳಿಗಿಂತ 2 ಪಟ್ಟು ವೇಗವಾಗಿ ಕೆಲಸ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಏನೇ ಸಮಸ್ಯೆಗಳು ಎದುರಾದರೂ ಬಗೆಹರಿಸಿ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಕೆಲಸ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಪ್ರತಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅಳವಡಿಸಲಾಗಿರುವ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಅವೈಜ್ಞಾನಿಕ, ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬ ದೂರು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬಂದಿದೆ. ಜತೆಗೆ ರಸ್ತೆ ಅಗೆದು ಗುಂಡಿ ಮುಚ್ಚದೆ ಅನೇಕ ಅಪಘಾತಗಳು ನಡೆದಿರುವ ಬಗ್ಗೆಯೂ ದೂರು ಬಂದಿದೆ. ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಎಚ್.ಜಿ.ಶ್ರೀನಿವಾಸ್, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net