ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿ

MEETINIG
Published on

ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಡಿ ಅನುಷ್ಠಾನದಲ್ಲಿರುವ ಕಾಮಗಾರಿಗಳನ್ನು ಶೀಘ್ರ ಕಾರ್ಯ ನಿರ್ವಹಿಸುವ ಮೂಲಕ ನಿಗಧಿತ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಕೆಆರ್ಡಿಬಿಯಿಂದ ಜಿಲ್ಲೆಗೆ ವಾರ್ಷಿಕ, 155.05 ಕೋಟಿ ರೂ. ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಅದರಂತೆ 621 ಕಾಮಗಾರಿಗಳ ಭೌತಿಕ ಗುರಿಯನ್ನು ನಿಗದಿ ಪಡಿಸಲಾಗಿದೆ. ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಭೌತಿಕ ಹಾಗೂ ಗುರಿಗಳನ್ನು ಸಾಧಿಸಬೇಕು ಎಂದರು.

ಕೆಆರ್ಐಡಿಎಲ್ ಇಲಾಖೆಗೆ 183 ಕಾಮಗಾರಿಗಳ ವಾರ್ಷಿಕ ಗುರಿ ನಿಗದಿ ಪಡಿಸಲಾಗಿದ್ದು, ಈವರೆಗೆ 28 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಲೋಕೊಪಯೋಗಿ ಇಲಾಖೆಗೆ ನಿಗದಿ ಪಡಿಸಲಾದ 121 ಕಾಮಗಾರಿಗಳ ವಾರ್ಷಿಕ ಭೌತಿಕ ಗುರಿಗೆ 28 ಕಾಮಗಾರಿಗಳ ಭೌತಿಕ ಗುರಿ ಸಾಧಿಸಲಾಗಿದೆ. ಪಂಚಾಯಿತಿ ರಾಜ್ ಇಂಜಿನಿಯರಿಂಗ್ ವಿಭಾಗದ 216 ಕಾಮಗಾರಿಗಳ ಭೌತಿಕ ಗುರಿಯಲ್ಲಿ ಇಲ್ಲಿಯವರೆಗೆ 91 ಕಾಮಗಾರಿಗಳ ಭೌತಿಕ ಸಾಧನೆ ಮಾಡಲಾಗಿದೆ. ನಿರ್ಮಿತಿ ಕೇಂದ್ರಕ್ಕೆ 5 ಕೋಟಿ ರೂ ಕಾಮಗಾರಿಗಳ ಗುರಿಗೆ 53 ಕಾಮಗಾರಿಗಳ ಗುರಿ ನಿಗಧಿಪಡಿಸಿತ್ತು. ನಿಗದಿತ ಗುರಿಯಲ್ಲಿ ಪ್ರಸ್ತುತ ಒಟ್ಟು 17 ಗುರಿಯ ಸಾಧನೆ ಮಾಡಲಾಗಿದೆ. ಇನ್ನೂ ಹಲವು ಕಾಮಗಾರಿಗಳು ಚಾಲನೆಯಲ್ಲಿವೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಪಿಒ ಸುನೀಲ ಬಿಸ್ವಾಸ್, ಮಂಡಳಿಯ ಯಾದಗಿರಿ ಕೋಶದ ತಾಂತ್ರಿಕ ಸಲಹೆಗಾರ ಸಂಗಮೇಶ ಗುಬ್ಬೇವಾಡ, ಲೋಕೊಪಯೋಗಿ ಇಲಾಖೆ ಇಇ ದೇವಿದಾಸ್ ಚವ್ಹಾಣ್, ಶೇಖ ಸಲಿಮುದ್ದೀನ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸತೀಶ್ ಗುದಿಗೆನವರ, ಶಂಕರ ಎ., ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕಿರಣ ಕುಮಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಭಗವಂತ ಅನವಾರ್, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net