

ಹಾಸನ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಗೆಲುವಾಗಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದ್ದೇನೆ. ಮುಂದಿನ ವಾರ ಪ್ರಚಾರಕ್ಕೆ ಹೋಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರು ತಿಳಿಸಿದರು.
ಶುಕ್ರವಾರ ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಅತೀ ಮತಗಳಿಂದ ಗೆಲುವು ಸಾಧಿಸಲಿ ಎಂದು ಹಾಸನಾಂಬೆಯಲ್ಲಿ ಬೇಡಿದ್ದೇನೆ. ಎನ್‌ಡಿಎ ಅಭ್ಯರ್ಥಿ ಎಂದ ಮೇಲೆ ಜೆಡಿಎಸ್-ಬಿಜೆಪಿ ಒಂದೇ. ಎರಡು ಪಕ್ಷದ ಮುಖಂಡರು ಕಾರ್ಯಕರ್ತರು ಒಟ್ಟಾಗಿಯೇ ಕೆಲಸ ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಬಿಜೆಪಿಯವರು ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ದೇವಿಯ ದರ್ಶನ ಮಾಡಿದ್ದೇನೆ. ನಮ್ಮ ಜಿಲ್ಲೆಯ, ರಾಜ್ಯದ ಜನ ಸುಭಿಕ್ಷವಾಗಿರಲಿ, ವಿಶೇಷವಾಗಿ ರೈತಾಪಿ ವರ್ಗಕ್ಕೆ ಒಳಿತಾಗಲಿ ಎಂದು ಕೇಳಿ ಕೊಂಡಿದ್ದೇನೆ. ಈ ಜಿಲ್ಲೆಗೆ ಯಾವುದೇ ರೀತಿಯ ಸಮಸ್ಯೆ ಬಾರದೆ, ಹಾಸನ ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಕಾಣಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.