ನಿಖಿಲ್ ಕುಮಾರಸ್ವಾಮಿ ಗೆಲುವಿನಲ್ಲಿ ಯಾವುದೇ ಅನುಮಾನವಿಲ್ಲ:ಸುರೇಶ್‌ಗೌಡ

ನಿಖಿಲ್ ಕುಮಾರಸ್ವಾಮಿ ಗೆಲುವಿನಲ್ಲಿ ಯಾವುದೇ ಅನುಮಾನವಿಲ್ಲ:ಸುರೇಶ್‌ಗೌಡ
Published on

ಹಾಸನ: ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿನಲ್ಲಿ ಯಾವುದೇ ಅನುಮಾನವಿಲ್ಲ. ಕ್ಷೇತ್ರದ ಜನರು ತೀರ್ಮಾನ ತೆಗೆದುಕೊಂಡು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ. ಜೆಡಿಎಸ್-ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಒಟ್ಟಾಗಿ ಈ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಜೆಡಿಎಸ್ ಮಾಜಿ ಶಾಸಕ ಸುರೇಶ್‌ಗೌಡ ಹೇಳಿದರು.

ಶನಿವಾರ ಹಾಸನಾಂಬೆ ದರ್ಶನ ಪಡೆದ ಅವರು, ನಮ್ಮ ಪಕ್ಷದ ನಿಖಿಲ್ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ಅವರ ಗೆಲುವಿನಲ್ಲಿ ಯಾವುದೇ ಅನುಮಾನವಿಲ್ಲ. ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಕೆಲಸಗಳಿಗೆ ಪ್ರತಿಫಲ ಸಿಗುವ ನಂಬಿಕೆ ಇದೆ. ಎಂದು ಅವರು ತಿಳಿಸಿದರು.

ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಮೂರು ಕಡೆಯೂ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ನಮಗಿದೆ. ವಿಶೇಷವಾಗಿ ಚನ್ನಪಟ್ಟಣದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಚುನಾವಣೆ ಅಂದ ಮೇಲೆ ಎಲ್ಲರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ. ನಾವು ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಅದೇ ರೀತಿ ಕಾಂಗ್ರೆಸ್‌ನವರೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹಾಗೆಂದು ನಾವೇನು ಎದೆಗುಂದಿಲ್ಲ. ಕೇವಲ ನಾಮಪತ್ರ ಸಲ್ಲಿಕೆಗೆ ಚನ್ನಪಟ್ಟಣದ ಮತದಾರರು ಯಾವ ರೀತಿ ಹರಿದು ಬಂದಿದ್ದರು ಎನ್ನುವುದನ್ನು ಗಮನಿಸಿದರೆ ನಿಖಿಲ್ ಕುಮಾರಸ್ವಾಮಿ ಅವರ ಗೆಲ್ಲುವ ಬಗ್ಗೆ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದರು.

ಹಾಸನಾಂಬೆ ದರ್ಶನ ಪಡೆದು ಈ ನಾಡನ್ನು ಸುಭೀಕ್ಷವಾಗಿ ಇಡಲಿ, ಎಲ್ಲಾ ಧರ್ಮದ ಹಾದಿಯಲ್ಲಿ ನಡೆಯಲಿ, ಎಲ್ಲರಿಗೂ ಶುಭವಾಗಲಿ ಎಂದು ಪ್ರಾರ್ಥಿಸಿದ್ದೇನೆ. ಪಕ್ಷದ ಗೆಲುವಿಗೂ ಕೋರಿಕೊಂಡಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net