ನಿಖರ, ವೈಜ್ಞಾನಿಕವಾಗಿ ಜಾತಿ ಜನ ಗಣತಿಗೆ ಕ್ರಮ ಕೈಗೊಳ್ಳಿ; ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮನವಿ

hk kumaraswami
Published on

ಹಾಸನ: ಒಳ ಮೀಸಲಾತಿ ಸಂಬಂಧ ಎಸ್‌ಸಿ ಪಟ್ಟಿಯಲ್ಲಿನ 101 ಜಾತಿಗಳ ಸಮೀಕ್ಷೆ ಕಾರ್ಯದಲ್ಲಿ ಹಲವು ಲೋಪ-ದೋಷಗಳು ಕಂಡುಬಂದಿದ್ದು, ಕೂಡಲೇ ಅವುಗಳನ್ನು ಸರಿಪಡಿಸಿ, ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮನವಿ ಮಾಡಿದರು.

ಪರಿಶಿಷ್ಟ ಜಾತಿಯ 101 ಜಾತಿಗಳ ಸಮೀಕ್ಷೆ ಕಾರ್ಯ ಮೇ 5ರಿಂದ ಪ್ರಾರಂಭವಾಗಿದೆ. ಮೂರು ಹಂತಗಳಲ್ಲಿ ನಡೆಯುತ್ತಿರುವ ಈ ಸಮೀಕ್ಷೆ ಕಾರ್ಯ ಮೇ 23ರಂದು ಕೊನೆಗೊಳ್ಳುತ್ತದೆ. ಸಮೀಕ್ಷೆ ಕಾರ್ಯ ಮುಕ್ತಾಯಗೊಳ್ಳಲು ಇನ್ನೂ 13 ದಿನ ಮಾತ್ರ ಬಾಕಿ ಇದೆ. ಆದರೆ ಈ ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರು ಹಾಗೂ ಸಂಬಂಧಿತ ಜಾತಿಗಳ ಜನರ ನಡುವೆ ಸರಿಯಾದ ಹೊಂದಾಣಿಕೆಯಾಗದೆ ಸಮೀಕ್ಷೆ ಕಾರ್ಯ ಅಪೂರ್ಣಗೊಳ್ಳುವ ಆತಂಕ ಎದುರಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಗಮನಹರಿಸಿ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಮನವಿ ಮಾಡುತ್ತಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮೀಕ್ಷಾ ಕಾರ್ಯ ಪ್ರಾರಂಭವಾಗಿ 12 ದಿನ ಕಳೆದರೂ ಬಹುತೇಕ ಹಳ್ಳಿ ಮತ್ತು ನಗರ ಪಟ್ಟಣದ ಮನೆಗಳಿಗೆ ಗಣತಿದಾರರು ಭೇಟಿ ನೀಡಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಿ ಸಂಬಂಧಪಟ್ಟ ನೊಡೆಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಬೇಕು. ಸಮೀಕ್ಷೆಗಾಗಿ ರೂಪಿಸಲಾಗಿರುವ ಆಂಡ್ರಾಯ್ಡಾ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ದೋಷಗಳಿದ್ದು, ಅದನ್ನು ಸರಿಪಡಿಸಬೇಕು. ಮನೆ ಮನೆಗೆ ಭೇಟಿ ನೀಡುತ್ತಿರುವ ಗಣತಿದಾರರು ಸರ್ವರ್ ಸಮಸ್ಯೆ ಇದೆ, ನಾಳೆ ಬರುತ್ತೇವೆ ಎಂದು ಸಮೀಕ್ಷೆಯನ್ನು ಅರ್ಥದಲ್ಲಿ ನಿಲ್ಲಿಸಿ ಹೋದವರು ಈವರೆಗೆ ಬಂದಿಲ್ಲ ಎಂದು ದೂರಿದರು.

ಸಮೀಕ್ಷೆದಾರರು ಹಳ್ಳಿಗಳ ಮನೆಮನೆಗೆ ಭೇಟಿ ನೀಡುವ ಸಮಯ ಮತ್ತು ದಿನಾಂಕವನ್ನು ಕರ ಪತ್ರದಲ್ಲಿ ಮುದ್ರಿಸಿ ಹಂಚಬೇಕು. ಸಮೀಕ್ಷೆ ಆಪ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಶ್ನಾವಳಿ ಕೇಳಲಾಗಿದ್ದು, ಕೆಲವು ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರಿಸಲು ಅವಿದ್ಯಾವಂತ, ಅನಕ್ಷರಸ್ಥ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಸೂಕ್ತ ಗಮನಹರಿಸಿ ಪ್ರಶ್ನೆಗಳನ್ನು ಸರಳವಾಗಿ ಕೇಳಲು ಸಮೀಕ್ಷೆದಾರರಿಗೆ ಸೂಚಿಸಬೇಕು. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಒಂದೊಂದೇ ಒಂಟಿ ಮನೆಗಳು ಕಾಡಿನ ಸ್ಥಳಕ್ಕೆ ಗಣತಿದಾರರು ತಲುಪಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಮನೆಗಳಲ್ಲಿ ವಾಸಿಸುತ್ತಿರುವವರು ಮನೆಗಳಿಗೆ ಬೀಗ ಹಾಕಿಕೊಂಡು ಕೂಲಿ ಕೆಲಸಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗಿರುತ್ತಾರೆ. ಇದರಿಂದಾಗಿ ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ನಿಖರವಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಆಯೋಗ ಗಮನಹರಿಸಬೇಕು. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ಕಾರ್ಯವನ್ನು ನಿಖರವಾಗಿ ಹಾಗೂ ವೈಜ್ಞಾನಿಕವಾಗಿ ಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪಾಧ್ಯಕ್ಷ ಅಂಬೂಗ ಮಲ್ಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಪಿ. ಶಂಕರರಾಜು, ಎಸ್‌ಸಿ, ಎಸ್‌ಟಿ ಅಧಿಕಾರಿಗಳ ಸಂಘದ ಅಧ್ಯಕ್ಷ ಎಚ್. ಕಾಡಯ್ಯ, ಕಾಂಗ್ರೆಸ್ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ದ್ಯಾವಪ್ಪ ಮಲ್ಲಿಗೆವಾಳ್, ನಗರಸಭೆ ಸದಸ್ಯ ಮಂಜುನಾಥ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net