ನಿಂತಿದ್ದ ಆಟೋಗೆ ಬಸ್ ಡಿಕ್ಕಿ; ಓರ್ವ ಸಾವು, ಇಬ್ಬರಿಗೆ ಗಾಯ

accident-15
Published on

ಹಾಸನ: ನಿಂತಿದ್ದ ಆಟೋಗೆ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಆಟೋ ಚಾಲಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ, ನುಗ್ಗೆಹಳ್ಳಿ ಹೋಬಳಿ, ಬಾಣನಕೆರೆ ಗ್ರಾಮದ ಮೂರ್ತಿ (55) ಮೃತ ಆಟೋ ಚಾಲಕ. ಹಾಸನ ತಾಲೂಕು ಶಾಂತಿಗ್ರಾಮದ ಹೋಬಳಿಯ ದೊಡ್ಡಬಸವನಹಳ್ಳಿ ಗ್ರಾಮದ ಆಟೋ ಚಾಲಕರಾದ ಆನಂದ್ (35) ಹಾಗೂ ಬೆಟ್ಟೇಗೌಡ (57) ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೂಲತಃ ಚನ್ನರಾಯಪಟ್ಟಣದ ಮೂರ್ತಿ ಹಾಸನ ತಾಲ್ಲೂಕಿನ, ಸಮುದ್ರಹಳ್ಳಿಯಲ್ಲಿ ವಾಸವಿದ್ದರು. ಗುರುವಾರ ಸಂಜೆ ಕೆಐಎಡಿಬಿ ಸರ್ಕಲ್ ಬಳಿಯಿರುವ ನಯಾರ ಪೆಟ್ರೋಲ್ ಬಂಕ್ ಮುಂಭಾಗ ಹೊಳೆನರಸೀಪುರ ರಸ್ತೆಯ ಎಡಭಾಗದಲ್ಲಿ ಮೂರ್ತಿ ತಮ್ಮ ಸ್ನೇಹಿತರಾದ ಆನಂದ, ಬೆಟ್ಟೇಗೌಡ ಜತೆ ರಸ್ತೆಯ ಎಡಬದಿಯಲ್ಲಿ ಆಟೋವನ್ನು ನಿಲ್ಲಿಸಿಕೊಂಡು ಆಟೋದಲ್ಲಿ ಕುಳಿತುಕೊಂಡು ಮಾತನಾಡುತ್ತಿರುವಾಗ ಹಾಸನ ಕಡೆಯಿಂದ ವೇಗವಾಗಿ ಬಂದ ಬಸ್ ನಿಲ್ಲಿಸಿದ್ದ ಆಟೋಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಜಖಂಗೊಂಡು ಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಉಳಿದ ಇಬ್ಬರು ಆಟೋ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net