ನಿಂತ ನೀರಾಗದಿರಲಿ ಮನುಷ್ಯನ ಜೀವನ

18-gdg-4
Published on

ಗದಗ: ಮನುಷ್ಯನ ಜೀವನ ನಿಂತ ನೀರಾಗಬಾರದು. ಕ್ರಿಯಾಶೀಲ ಜೀವನದಿಂದ ಬಾಳು ಬದುಕು ಉಜ್ವಲ. ಜೀವನ ಉನ್ನತಿಗೆ ಕಾಯಕ ಸೋಪಾನವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಅಮೃತವಾಹಿನಿ ಟ್ರಸ್ಟ್ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ 73ನೇ ಅಮೃತವಾಹಿನಿಯಲ್ಲಿ ಲಿಂ. ಬಸಣ್ಣ ಮಲ್ಲಾಡದ ಅವರ ಕ್ರಿಯಾಶೀಲ ವ್ಯಕ್ತಿತ್ವದ ನೆನಹು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಬೆಳವಣಿಗೆಯಾಗಲು ಸಾಧ್ಯ. ಶ್ರಮದಿಂದ ಬಾಳಿದರೆ ಬದುಕಿನಲ್ಲಿ ಉನ್ನತಿ, ಶಾಂತಿ ಪಡೆಯಲು ಸಾಧ್ಯ ಎಂದರು.

ವೀರಶೈವ ಧರ್ಮದಲ್ಲಿ ಕಾಯಕ ಜೀವನಕ್ಕೆ ಬಹಳಷ್ಟು ಬೆಲೆಯಿದೆ. ಅಸಾಧ್ಯವಾದುದನ್ನು ಜೀವನದಲ್ಲಿ ಸಾಧಿಸಿ ಶ್ರೇಯಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.

ಲಿಂ.ಬಸಣ್ಣ ಮಲ್ಲಾಡದ ಅವರು ಮೌಲ್ಯಾಧಾರಿತ ಜೀವನ ನಡೆಸಿ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರು. ವಾಣಿಜ್ಯೋದ್ಯಮ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷರಾಗಿ, ಮಾಂಗಲ್ಯ ಮಂದಿರ ಟ್ರಸ್ಟಿನ ಕಾರ್ಯಾಧ್ಯಕ್ಷರಾಗಿ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದನ್ನು ಮರೆಯಲಾಗದು. ಶ್ರೀ ರಂಭಾಪುರಿ ಪೀಠದ ಜತೆಗೆ ಅವಿನಾಭಾವ ಸಂಬಂಧ ಹೊಂದಿದ್ದು, ಶ್ರೀ ರಂಭಾಪುರಿ ವೀರಗಂಗಾಧರ ಮತ್ತು ಶ್ರೀ ರುದ್ರಮುನಿ ಜಗದ್ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದರು. ನಮ್ಮ ಕಾಲದಲ್ಲೂ ಸಹ ಅತ್ಯಂತ ಅಮೂಲ್ಯ ಸೇವೆ ಸಲ್ಲಿಸಿರುವುದು ಅವರಲ್ಲಿರುವ ಪೀಠಾಭಿಮಾನಕ್ಕೆ ಸಾಕ್ಷಿಯಾಗಿದೆ. ಅವರ ಕ್ರಿಯಾಶೀಲ ವ್ಯಕ್ತಿತ್ವ ಯುವ ಜನಾಂಗಕ್ಕೆ ಮಾದರಿಯಾಗಬೇಕು ಎಂದು ಆಶಿಸಿದರು.

ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಸುಳ್ಳದ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ, ಸೂಡಿಯ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ನರೇಗಲ್ಲಿನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಅಬ್ಬಿಗೇರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ಗಂಗಣ್ಣ ಮಹಾಂತಶೆಟ್ಟರ, ಡಿ.ಆರ್. ಪಾಟೀಲ, ಪತ್ರಕರ್ತ ಮಂಜುನಾಥ ಅಬ್ಬಿಗೇರಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಪ್ಪ ಕುರಡಗಿ, ಕುಷ್ಟಗಿಯ ವೀರಣ್ಣ ಬಳಿಗಾರ, ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜಣ್ಣ ಬೇಲೇರಿ ಪಾಲ್ಗೊಂಡಿದ್ದರು.

ಹಲವಾರು ಭಕ್ತರಿಗೆ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು. ಗದಗ ಮರ್ಚೆಂಟ್ಸ್ ಅರ್ಬನ್ ಕೋ-ಆಪ್ ಬ್ಯಾಂಕ್ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಸಂಗೀತ ಸುಧೆ ಜರುಗಿತು. ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಶಿಗ್ಲಿ ಸ್ವಾಗತಿಸಿದರು. ಪ್ರಕಾಶ ಬೇಲಿ ನಿರೂಪಿಸಿದರು.

ಶ್ರೀಗಳಿಂದ ಗುರುರಕ್ಷೆ ಪಡೆದ ದಂಪತಿ

ಬಾಳೆಹೊನ್ನೂರು ಧರ್ಮ ಪೀಠದಿಂದ ಸ್ಥಾಪಿತಗೊಂಡ ಶ್ರೀ ವೀರಶೈವ ಸದ್ಬೋಧನಾ ಸಂಸ್ಥೆಯಲ್ಲಿ ದತ್ತಿ ಸ್ಥಾಪನೆ ಮಾಡಿದ್ದು, ಈ ಸಂಸ್ಥೆಯಿಂದ ದತ್ತಿನಿಧಿ ಸಮರ್ಪಿಸುವವರ ಹೆಸರಿನಲ್ಲಿ ವೀರಶೈವ ಧರ್ಮ ಸಾಹಿತ್ಯ ಕೃತಿಯೊಂದು ಪ್ರಕಟವಾಗುತ್ತದೆ. ಲಿಂ. ಬಸಣ್ಣ ಮಲ್ಲಾಡದ ಅವರ ಹೆಸರಿನಲ್ಲಿ ಅವರ ಪುತ್ರರಾದ ರಾಜಣ್ಣ ಮಲ್ಲಾಡದ ಅವರು 5 ಲಕ್ಷ ರೂ. ದತ್ತಿನಿಧಿ ಅರ್ಪಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜಣ್ಣ ದಂಪತಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅವರಿಂದ ಗುರುರಕ್ಷೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net