

ಬಸವಕಲ್ಯಾಣ: ನಾವೆಲ್ಲರೂ ಒಂದು ಮತ್ತು ಹಿಂದು ಎಂಬ ವಿಶಾಲ ಮನೋಭಾವ ಬೆಳೆಯುವ ಅಗತ್ಯವಿದೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ನುಡಿದರು.
ನಗರದ ಆರ್ಯ ಸಮಾಜ ಮಂದಿರ ಪರಿಸರದಲ್ಲಿ ಬುಧವಾರ ಆಯೋಜಿಸಿದ್ದ ಹುತಾತ್ಮ ಧರ್ಮಪ್ರಕಾಶಜಿ ಅವರ ೮೭ನೇ ಸ್ಮೃತಿ ಹಾಗೂ ದೇಶ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ದೇಶಕ್ಕಾಗಿ ಜೀವತೆತ್ತ ಧರ್ಮಪ್ರಕಾಶಜಿ ಕ್ರಾಂತಿಕಾರಿ ವ್ಯಕ್ತಿತ್ವದ ಬಗ್ಗೆ ಯುವ ಸಮೂಹಕ್ಕೆ ತಿಳಿಸುವ ಮೂಲಕ ರಾಷ್ಟ್ರಭಕ್ತಿ ಜಾಗೃತಗೊಳಿಸುವುದೇ ಈ ಕಾರ್ಯಕ್ರಮದ ಮೂಲ ಆಶಯ ಎಂದರು.
ಮಹಾರಾಷ್ಟ್ರದ ಪಂಡಿತ ನಯನಕುಮಾರ ಆಚಾರ್ಯ ವಿಶೇಷ ಉಪನ್ಯಾಸ ನೀಡಿ, ಆರ್ಯ ಶಬ್ದದ ಅರ್ಥ ಅತ್ಯಂತ ವಿಶಾಲವಾದದ್ದು. ಆರ್ಯತ್ವದೊಂದಿಗೆ ಸತ್ಯ ಸ್ವೀಕರಿಸಿ ಜ್ಞಾನದ ಆಧಾರದಲ್ಲಿ ಬದುಕು ನಡೆಸಬೇಕಿದೆ. ಪ್ರತಿಕ್ಞಣ ಜ್ಞಾನಪೂರ್ವಕ, ಕ್ರಿಯಾಶೀಲವಾಗಿ ಸತ್ಯದ ತಳಹದಿ ಮೇಲೆ ಒಳ್ಳೆಯ ಜನರ ವಿಚಾರಗಳನ್ನು ಜೋಡಿಸಬೇಕಿದೆ. ದಯಾಭಾವ ಬೆಳೆಸಿಕೊಂಡು ಎಲ್ಲರೊಂದಿಗೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಇರಬೇಕು ಎಂದು ಸಲಹೆ ನೀಡಿದರು.
ಹೈದರಾಬಾದ್‌ನ ಪಂಡಿತ ನರೇಂದ್ರಜಿ ಆಚಾರ್ಯ ಉಪನ್ಯಾಸ ನೀಡಿ, ಆದರ್ಶ ಜೀವನ ವಿಧಾನ ವೇದದಲ್ಲಿದೆ. ಸತ್ಯದ ಜ್ಞಾನವಿದ್ದಾಗ ಮಾತ್ರ ಆದರ್ಶ ಜೀವನ ಸಾಧ್ಯ. ವೇದಗಳನ್ನು ಓದುವ ಜತೆಗೆ ಮತ್ತೊಬ್ಬರಿಗೂ ಓದಿಸಿ ಮನದಟ್ಟಾಗುವಂತೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ಮಂತ್ರಿ ಸಿದ್ದಾಜಿ ಪಾಟೀಲ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಸಭಾದ ಮಾಜಿ ಅಧ್ಯಕ್ಷ ಸುಭಾಷ ಅಷ್ಟಿಕರ್, ಮಹಾರಾಷ್ಟçದ ಅರ್ಜುನರಾವ ಸೋಮವಂಶಿ, ಹೈದರಾಬಾದ್‌ನ ಅಭಾ ವೇದವಾದಿನಿ, ಹುಮನಾಬಾದ್‌ನ ಬಸವರಾಜ ಆರ್ಯ ಮಾತನಾಡಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಆಚಾರ್ಯೆ ಕಲಭಾಷಿಣಿ, ನಾರಾಯಣರಾವ ಚಿದ್ರಿ, ಮಾಣಿಕರಾವ ಲಾಡ, ಮಾರುತಿರಾವ ಮಹೇಂದ್ರಕರ್, ವಿಠಲರಾವ ಸೂರ್ಯವಂಶಿ, ಸತೀಶರಾವ ಲಾಡ, ಅಶ್ವಿನ್ ಸುತ್ರಾವೆ, ಭಾನುಪ್ರಸಾದ ಪಾಂಡೆ, ಶಿವಾಜಿ ಕಾಳೆ, ಡಾ.ಬಸವರಾಜ ಸ್ವಾಮಿ, ರವಿ ನಾವದಗೀಕರ್, ಶ್ರೀಶೈಲ ವಾತಡೆ ಇತರರಿದ್ದರು.
ಆರ್ಯ ಸಮಾಜದ ಪ್ರಧಾನ ಶಿವಾಜಿರಾವ ಜಗತಾಪ ಪ್ರಾಸ್ತಾವಿಕ ಮಾತನಾಡಿದರು. ಪುರೋಹಿತ ಸುರೇಂದ್ರಗೀರ ಗೋಸ್ವಾಮಿ ಸ್ವಾಗತಿಸಿದರು. ಮಂತ್ರಿ ಸಂಜುಕುಮಾರ ಜಾಧವ್ ನಿರೂಪಣೆ ಮಾಡಿದರು. ಉದಗೀರದ ಪ್ರತಾಪಸಿಂಹಜಿ ಚವ್ಹಾಣ್ ಭಜನೆ ನಡೆಸಿಕೊಟ್ಟರು.
ಸ್ಮಾರಕ ಸ್ತಂಭ ಉದ್ಘಾಟನೆ: ಬಸವಕಲ್ಯಾಣದ ಈಶ್ವರ ನಗರದಲ್ಲಿ ಬೆಳಗ್ಗೆ ಹುತಾತ್ಮ ಧರ್ಮಪ್ರಕಾಶ ಸ್ಮಾರಕ ಸ್ತಂಭದ ಲೋಕಾರ್ಪಣೆ ಮಾಡಲಾಯಿತು. ಧರ್ಮಪ್ರಕಾಶ ಪ್ರಾಥಮಿಕ ಶಾಲೆಯಲ್ಲಿ ಅಗ್ನಿಹೋತ್ರ(ಯಜ್ಞ) ನಂತರ ಧರ್ಮಪ್ರಕಾಶ ಗಲ್ಲಿಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಆರ್ಯ ಸಮಾಜ ಮಂದಿರವರೆಗೆ ಭಜನೆ, ಜೈಘೋಷಗಳೊಂದಿಗೆ ನಗರ ಕೀರ್ತನೆ ನಡೆಯಿತು.
ಮಹಾತ್ಮ ಬಸವೇಶ್ವರ ಮತ್ತು ಆರ್ಯ ಸಮಾಜದ ಕೆಲ ವಿಚಾರಗಳಲ್ಲಿ ಸಾಮ್ಯತೆ ಇದೆ. ಆರ್ಯ ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಬರುತ್ತಿದ್ದು, ಇಲ್ಲಿನ ಕಾರ್ಯಚಟುವಟಿಕೆಗೆ ಸದಾ ಸಹಾಯ, ಸಹಕಾರ ಇರಲಿದೆ.
| ಮಲ್ಲಿಕಾರ್ಜುನ ಖೂಬಾ ಮಾಜಿ ಶಾಸಕ
ಸಮಾಜದ ಪರಿವರ್ತನೆ ಹಾಗೂ ಸುಧಾರಣೆಯಲ್ಲಿ ಮಹಾತ್ಮ ಬಸವಣ್ಣ ಹಾಗೂ ಮಹರ್ಷಿ ದಯಾನಂದ ಸರಸ್ವತಿ ಕೊಡುಗೆ ದೊಡ್ಡದು. ರಾಜ್ಯದಲ್ಲಿ ಅನೇಕ ಕಡೆ ಆರ್ಯ ಸಮಾಜದ ಆಸ್ತಿ ಇದ್ದರೂ ಹಲವೆಡೆ ವಿವಾದವಿದೆ. ಎಲ್ಲ ಆಸ್ತಿಗಳನ್ನು ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ವ್ಯಾಪ್ತಿಗೆ ತರಲಾಗುವುದು. ಎಲ್ಲ ಕಾರ್ಯಕ್ರಮಗಳು ಆರ್ಯ ಸಮಾಜದ ಅಧೀನದಲ್ಲೇ ನಡೆಯಲಿವೆ.
| ಸಿದ್ದಾಜಿ ಪಾಟೀಲ್ ಮಂತ್ರಿ, ಕರ್ನಾಟಕ ಆರ್ಯ ಪ್ರತಿನಿಧಿ ಸಭಾ