

ರಾಜೇಂದ್ರ ಶಿಂಗನಮನೆ ಶಿರಸಿ
ಪ್ರಸಕ್ತ ವರ್ಷ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಏರಿಕೆಯಾದ ಹಿನ್ನೆಲೆಯಲ್ಲಿ ಶಾಲೆಗಳ ಗುಣಮಟ್ಟ ವೃದ್ಧಿಸಿಕೊಳ್ಳಲು ಶಿಕ್ಷಣ ಇಲಾಖೆಯು ಸಮುದಾಯದ ಸಹಕಾರ ಕೋರಿದೆ. ಅಲ್ಲದೆ, ‘ಶಾಲೆಗಾಗಿ ನಾವು-ನೀವು’ ಪೋಷಣಾ ಯೋಜನೆಗೆ ಚುರುಕು ನೀಡಿದೆ.
ಸರ್ಕಾರ ಹಾಗೂ ಸಮುದಾಯವು ಜತೆಗೂಡಿ ಸರ್ಕಾರಿ ಶಾಲೆಗಳನ್ನು ಉತ್ತಮ ಗುಣಮಟ್ಟದ ಕೇಂದ್ರವಾಗಿ ರೂಪಿಸಲು 2009ರಲ್ಲಿ ರಾಜ್ಯ ಸರ್ಕಾರವು ಶಾಲೆಗಾಗಿ ನಾವು-ನೀವು ಯೋಜನೆ ಜಾರಿಗೊಳಿಸಿತ್ತು. ಆದರೆ, ಈ ಹಿಂದೆ ಮಕ್ಕಳು ಹಾಗೂ ಪಾಲಕರ ನಿರುತ್ಸಾಹದ ಕಾರಣ ಹಲವು ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿದ್ದವು. ಸರ್ಕಾರಿ ವ್ಯವಸ್ಥೆಯೆಡೆ ಸಮುದಾಯದ ಅಸಡ್ಡೆಯಿಂದ ಶಾಲೆಗಳ ಪೋಷಣೆಯೂ ಕುಂಠಿತವಾಗಿತ್ತು. ಜತೆಗೆ, ಶಾಲೆಗಾಗಿ ನಾವು-ನೀವು ಯೋಜನೆ ಇದ್ದೂ ಇಲ್ಲದಂತೆ ತೀರಾ ನಿಧಾನಗತಿಯಲ್ಲಿ ಸಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಸರ್ಕಾರಿ ಶಾಲೆಗಳತ್ತ ಹೆಚ್ಚಿನ ಮಕ್ಕಳು ಹೆಜ್ಜೆ ಹಾಕಿದ ಕಾರಣ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲಾ ಪೋಷಣೆ ಯೋಜನೆಗೆ ವೇಗ ನೀಡಿದೆ.
ಪೂರ್ವ ವಿದ್ಯಾರ್ಥಿಗಳೇ ಪೋಷಕರು: ಯೋಜನೆಯಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ಬಂದಿದ್ದು, ಆಯಾ ಶಾಲಾ ಪೋಷಕರನ್ನು ಗುರುತಿಸಿ ಅವರಿಂದ ಒಪ್ಪಂದ ಪತ್ರ ಮಾಡಿಕೊಳ್ಳುತ್ತಿದೆ. ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆ ಪಡೆದವರು, ಸ್ವಂತ ಉದ್ಯೋಗಿಗಳು, ಉದ್ದಿಮೆದಾರರು, ಪ್ರಗತಿಪರ ವ್ಯಕ್ತಿಗಳನ್ನು ಗುರುತಿಸುವ ಜತೆ ಅವರನ್ನು ಸಂರ್ಪಸಿ ಶಾಲಾ ಪೋಷಣೆಗೆ ಸಹಕಾರ ನೀಡುವಂತೆ ಕೋರಲಾಗುತ್ತಿದೆ. ಈಗಾಗಲೇ ಕೆಲವು ಪೋಷಕರು ಶಾಲಾ ದುರಸ್ತಿ, ಕಲಿಕೋಪಕರಣ ಖರೀದಿ, ಕಟ್ಟಡ ನಿರ್ವಣಕ್ಕೆ ಸಹಕಾರ ನೀಡಿದ್ದಾರೆ. ಇನ್ನೂ ಕೆಲವರು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇಲಾಖೆಯ ಅಧಿಕಾರಿಗಳು ಈಗಾಗಲೇ ಸಂರ್ಪಸಿದ 100ಕ್ಕೂ ಹೆಚ್ಚು ಪೋಷಕರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚಿದ ಸಂಖ್ಯೆ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ 1107 ಸರ್ಕಾರಿ ಕಿರಿಯ ಪ್ರಾಥಮಿಕ, 1076 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ 356 ಸರ್ಕಾರಿ ಪ್ರೌಢಶಾಲೆಗಳಿವೆ. ಇವುಗಳಲ್ಲಿ ಪ್ರಸಕ್ತ ವರ್ಷ ಶೇ. 50ರಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಶೈಕ್ಷಣಿಕ ಜಿಲ್ಲೆಗಳಲ್ಲಿ 5ಕ್ಕೂ ಹೆಚ್ಚು ಮುಚ್ಚಿದ ಶಾಲೆಗಳನ್ನು ಪುನಃ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಪ್ರತಿ ಶಾಲೆಗೆ ಕನಿಷ್ಠ 3 ಪೋಷಕರಂತೆ 6 ಸಾವಿರಕ್ಕೂ ಹೆಚ್ಚಿನ ಪೋಷಕರನ್ನು ಇಲಾಖೆ ಅಧಿಕಾರಿಗಳು ಸಂರ್ಪಸಲು ಕ್ರಮ ವಹಿಸಿದ್ದಾರೆ.
ಪೋಷಣೆಯಲ್ಲಿ ಏನೇನಿದೆ? : ಯೋಜನೆಯ ಸಾಮರ್ಥ್ಯ ಅಭಿವೃದ್ಧಿ ಚಟುವಟಿಕೆಯಡಿ ಶಿಕ್ಷಕರ ಕೌಶಲ ಮತ್ತು ಸಾಮರ್ಥ್ಯ ಅಭಿವೃದ್ಧಿ ತರಬೇತಿ
ಶಿಕ್ಷಕರು ಹಾಗೂ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ, ಕ್ರೀಡಾ ಮೇಳ, ಸಾಂಸ್ಕೃತಿಕ ಉತ್ಸವ, ಪರಿಸರ ಶಿಬಿರ, ವಾರ್ಷಿಕೋತ್ಸವ, ವ್ಯಕ್ತಿತ್ವ ವಿಕಸನ ಶಿಬಿರ
* ವೃತ್ತಿಪರ ಹಾಗೂ ಕರಕುಶಲ ಸಾಮಗ್ರಿ ತಯಾರಿಕೆಯಲ್ಲಿ ತರಬೇತಿ ಪಡೆಯಲು ಪೋಷಕರ ಸಹಾಯ, ಗ್ರಂಥಾಲಯ ಸ್ಥಾಪನೆ.
* ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಕಲಿಕಾ ಸಾಮಗ್ರಿಗಳು, ಕಲಿಕೋಪಕರಣಗಳು, ವಿದ್ಯಾರ್ಥಿ ವೇತನ, ಕೊಠಡಿಗಳ ನಿರ್ವಣ, ಅಕ್ಷರ ದಾಸೋಹದ ಮೌಲ್ಯ ವರ್ಧನೆ.
*ಅಂಗವಿಕಲ ಮಕ್ಕಳ ಗೃಹಾಧಾರಿತ ಶಿಕ್ಷಣಕ್ಕೆ ನೆರವು ಹಾಗೂ ಕಟ್ಟಡ ನಿರ್ಮಾಣ ಸಂಬಂಧಿ ಚಟುವಟಿಕೆ
ಶಾಲಾ ಪೋಷಣೆ ಕಾರ್ಯಕ್ರಮಕ್ಕಾಗಿ ಶಾಲಾ ಪೋಷಕರನ್ನು ಗುರುತಿಸಿ ಒಪ್ಪಂದ ಪತ್ರ ಮಾಡಿಕೊಳ್ಳುವ ಬಗ್ಗೆ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲ ಆಸಕ್ತ ಪೋಷಕರು ಉತ್ಸಾಹ ತೋರಿದ್ದು, ಶಾಲಾಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಹಲವು ಕಡೆ ಪೋಷಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಈ ಕ್ರಮ ಅನುಕೂಲ ಆಗಲಿದೆ. | ದಿವಾಕರ ಶೆಟ್ಟಿ ಡಿಡಿಪಿಐ ಶಿರಸಿ ಶೈಕ್ಷಣಿಕ ಜಿಲ್ಲೆ
ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಸಲು ಅಲ್ಲಿನ ವ್ಯವಸ್ಥೆಗಳು ಕೂಡ ಕಾರಣ ಆಗುತ್ತವೆ. ಸರ್ಕಾರದಿಂದ ನೀಡುವ ಅನುದಾನದಿಂದ ಎಲ್ಲ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲದ ಕಾರಣ ಸಮುದಾಯದ ಸಹಕಾರ ಪಡೆದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡಲು ಈ ಯೋಜನೆಯಡಿ ಸಾಧ್ಯವಾಗುತ್ತಿದೆ. ಸ್ಥಳೀಯ ದಾನಿಗಳು, ಪೋಷಕರ ಜತೆ ಶಾಲೆಯ ಪೂರ್ವ ವಿದ್ಯಾರ್ಥಿಗಳ ಮಾಹಿತಿ ಪಡೆದು ಅವರನ್ನು ಸಂರ್ಪಸುವ ಕಾರ್ಯ ನಡೆದಿದೆ. | ಕೃಷ್ಣಮೂರ್ತಿ ಹೆಗಡೆ ಗುಬ್ಬಿಗದ್ದೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ