

ರಾಯಚೂರು: ನಾವೀನ್ಯತೆ ಸಂಶೋಧನೆಯ ಪ್ರಮುಖ ಲಕ್ಷಣವಾಗಿದ್ದು, ಒಂದು ವಿಷಯದ ಮೇಲೆ ಒಬ್ಬರು ಸಂಶೋಧನೆ ಮಾಡಿ ಬೆಳಕು ಚೆಲ್ಲಿದ ಮೇಲೆ ಮತ್ತೊಬ್ಬರು ಅದೇ ವಿಚಾರಗಳನ್ನು ಬರೆಯುವುದು ನಿಷ್ಪ್ರಯೋಜಕ ಎಂದು ತುಮಕೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರೂಪೇಶಕುಮಾರ ಹೇಳಿದರು.
ಸ್ಥಳೀಯ ರಾಯಚೂರು ವಿವಿಯ ಕೃಷ್ಣತುಂಗೆ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಶುಕ್ರವಾರ ಆಯೋಜಿಸಿದ್ದ ವಿದ್ವತ್ಪೂರ್ಣ ಬರವಣಿಗೆ ಮತ್ತು ಪ್ರಕಟಣೆ ಕುರಿತು ವಿಶೇಷ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಪ್ರಿಯ ಮತ್ತು ವಿದ್ವತ್ಪೂರ್ಣ ಬರವಣಿಗೆ ಎರಡೂ ಭಿನ್ನ. ಪತ್ರಿಕೆ, ಆನ್‌ಲೈನ್ ವೆಬ್ ವೇದಿಕೆಗಳಲ್ಲಿ ಪ್ರಕಟವಾಗುವ ಬರಹಗಳಿಗೆ ಹೆಚ್ಚಿನ ಓದುಗರಿರುತ್ತಾರೆ. ಅವುಗಳನ್ನು ಯಾರು, ಯಾವಗ ಬೇಕಿದ್ದರೂ ಓದಬಹುದು. ಆದರೆ ವಿದ್ವತ್ಪೂರ್ಣ ಬರವಣಿಗೆ ಆ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರು ಮಾತ್ರ ಓದುತ್ತಾರೆ.
ಸಂಶೋಧನಾ ಬರವಣಿಗೆಗಳು ವಿದ್ವತ್ಪೂರ್ಣವಾಗಿರುತ್ತಿದ್ದು, ಸಾಮಾನ್ಯವಾಗಿ ಸುದೀರ್ಘವಾಗಿರುತ್ತವೆ. ಆ ವಿಷಯದ ಕುರಿತು ಆಳವಾದ ಜ್ಞಾನ ಬೇಕಿರುವವರು ಮತ್ತು ಬಯಸುವವರು ಮಾತ್ರ ಅವುಗಳನ್ನು ಓದುತ್ತಾರೆ ಎಮದು ಡಾ.ರೂಪೇಶಕುಮಾರ ಹೇಳಿದರು.
ವಿವಿ ವೌಲ್ಯಮಾಪನ ಕುಲಸಚಿವ ಪ್ರೊ.ಎಂ.ಯರ‌್ರಿಸ್ವಾಮಿ ಮಾತನಾಡಿ, ಇತ್ತೀಚೆಗೆ ಗುಣಮಟ್ಟದ ಸಂಶೋಧನಾ ಬರವಣಿಗೆಗಳು ಕಡಿಮೆಯಾಗುತ್ತಿದ್ದು, ಸಂಶೋಧಕರು ನವೀನವಾದ ಮಾಹಿತಿ, ಜ್ಞಾನವನ್ನು ಸೃಜಿಸುವ ಬದಲು, ಇರುವ ಮಾಹಿತಿಯನ್ನೆ ಆಚೀಚೆ ಮಾಡಿ ಪ್ರಕಟಿಸುತ್ತಿರುವುದು ಖೇದನೀಯ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಶೋಧಕರ ಸಂಖ್ಯೆ ತುಂಬಾ ಕಡಿಮೆಯಿದೆ. ಇಲ್ಲಿಯ ಇತಿಹಾಸ, ಭೌಗೋಳಿಕ ಲಕ್ಷಣ, ಜಾನಪದ ಸಾಹಿತ್ಯ, ಕೃಷಿ ಸೇರಿದಂತೆ ಇನ್ನಿತರ ವಿಷಯಗಳ ಮೇಲೆ ಸಂಶೋಧನೆ ಮಾಡಲು ಅವಕಾಶವಿದ್ದರೂ ಗಮನಾರ್ಹ ಪ್ರಮಾಣದಲ್ಲಿ ಆ ಕೆಲಸವಾಗುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣಾಕಾರಿ ಡಾ.ಜಿ.ಎಸ್.ಬಿರಾದರ, ಐಕ್ಯುಎಸಿ ಸಂಯೋಜಕ ರಾಜೇಶ, ಪ್ರಾಧ್ಯಾಪಕರಾದ ಪ್ರೊ.ಸಿ.ಎಸ್.ಪಾರ್ವತಿ, ಪ್ರೊ.ಪಿ.ಭಾಸ್ಕರ, ಡಾ.ಕೆ.ನಾಗರಾಜ, ಮಹೀಂದ್ರರೆಡ್ಡಿ, ಪ್ರೊ.ನುಸ್ರತ್ ಾತೀಮಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.