ನಾವಿರುವ ಜಾಗವೇ ಸ್ವರ್ಗ

Siddeshwar swaiji Pravachana
Published on

ಈ ಜಗತ್ತು ದೇವನ ಲೀಲಾ ವಿಸ್ತಾರ. ಇಲ್ಲಿ ಎಲ್ಲವೂ ಅತ್ಯದ್ಭುತ. ಭೂಮಂಡಲ ಎಂದರೆ ದೇವ ಮಂಡಲ, ಸ್ವರ್ಗ. ನಾವಿರುವ ಜಾಗವೇ ಸ್ವರ್ಗ. ಕಣ್ಣು ತೆರೆದು ಸ್ವಚ್ಛ ಮನಸಿನಿಂದ ನೋಡಬೇಕಷ್ಟೆ. ಇದೆಲ್ಲವನ್ನೂ ಅದ್ಭುತ ದೇವಶಕ್ತಿ ರೂಪಿಸಿದೆ. ಇಲ್ಲಿ ಎಲ್ಲವೂ ಇದೆ. ಕೊರತೆಯೇನಾದರೂ ಇದ್ದರೆ ಅದು ಮನಸುಗಳಲ್ಲಿ.

ನೋಡಲು ಚಂದ್ರ ಸುಂದರವಾಗಿದ್ದಾನೆ. ಆದರೆ, ಅಲ್ಲಿ ನೀರಿಲ್ಲ. ಎಷ್ಟೋ ಗ್ರಹಗಳು ಇವೆ. ಮನುಷ್ಯನಿಗೆ ಬದುಕಲು ಇರುವುದು ಭೂಮಿ ಒಂದೇ.

ಭೂಮಂಡಲ ನಾಶವಾದರೆ ಮನುಷ್ಯನಿಂದಲೇ ವಿನಃ ಪ್ರಾಣಿ ಪಕ್ಷಿಗಳಿಂದ ಅಲ್ಲ. ಉದಾಹರಣೆಗೆ- ಪಕ್ಷಿ ಹಣ್ಣಿನ ಗಿಡಗಳನ್ನು ನೋಡಿದರೆ, ಅದರಲ್ಲಿ ಒಂದು ಹಣ್ಣನ್ನು ತಿಂದು ಸಂತೋಷದಿಂದ ಮಧುರವಾದ ಗೀತೆ ಹಾಡುತ್ತ ಸಾಗುತ್ತದೆ. ಆದರೆ, ಮನುಷ್ಯ ಹಣ್ಣಿನ ಗಿಡಗಳನ್ನು ಕಂಡರೆ, ಈ ಎಲ್ಲ ಹಣ್ಣುಗಳನ್ನು ಮಾರಾಟ ಮಾಡಿದರೆ ಎಷ್ಟು ಹಣ ಗಳಿಸಬಹುದು ಎಂದು ವಿಚಾರ ಮಾಡುತ್ತಾನೆ. ಮನುಷ್ಯನಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಅದೇ ವ್ಯತ್ಯಾಸ!

ಆಕಾಶ, ನಿಸರ್ಗ, ಹೂ ಹಣ್ಣು, ಪಕ್ಷಿ, ಮನುಷ್ಯ ಇವೆಲ್ಲವುಗಳಿರುವ ಇದುವೇ ಸ್ವರ್ಗ. ಯಾವ ಗ್ರಹದಲ್ಲೂ ಈ ಶ್ರೀಮಂತಿಕೆ ಇಲ್ಲ. ಇಂಥ ಸ್ವರ್ಗದಲ್ಲಿ ನಾಲ್ಕು ದಿನ ಚೆನ್ನಾಗಿ ಬದುಕಬೇಕು. ಎದ್ದ ಕೂಡಲೇ ಈ ಸೃಷ್ಟಿಕರ್ತನನ್ನು ಸ್ಮರಣೆ ಮಾಡಬೇಕು. ಇಲ್ಲಿ ಜೀವಿಸುವ ಎಂತಹ ಅವಕಾಶ ಕೊಟ್ಟೆ ಎಂದು ನಮಿಸಬೇಕು.

ಹೂವನ್ನು ನೋಡಿದರೆ ಹೃದಯ ಅರಳುತ್ತದೆ. ಕೈ ಕಾಲುಗಳಿಗೆ ಅಸಾಮಾನ್ಯವಾದದ್ದನ್ನು ಮಾಡುವ ಶಕ್ತಿ ಇದೆ. ಅದಿರುವಾಗಲೇ ಏನಾದರೂ ಸಾಧನೆ ಮಾಡಬೇಕು. ಕಪ್ಪು, ಬಿಳಿ ಬಣ್ಣ ಮುಖ್ಯವಲ್ಲ. ಈ ಜಗತ್ತಿನಲ್ಲಿ ಬದುಕುವ ಅವಕಾಶ ಸಿಕ್ಕಿದೆಯಲ್ಲ? ಅದು ಮಹತ್ವದ್ದಾಗಿದೆ.

ನಾವು ಆಡುವ ಮಾತು ಇನ್ನೊಬ್ಬರಿಗೆ ನೋವಾಗದಂತೆ ಇರಬೇಕು; ಆನಂದ ಆಗುವಂತಿರಬೇಕು. ಮನಸು ಶುದ್ಧ ಇದ್ದರೆ ಜೀವನ ಸ್ವರ್ಗ; ಅಶುದ್ಧ ಇದ್ದರೆ ಅದೇ ನರಕ. ಸ್ವರ್ಗ ಮೇಲೆ ಇಲ್ಲ; ಎಲ್ಲವೂ ಭೂಮಂಡಲದಲ್ಲೇ ಇದೆ.

ಜ್ಞಾನಿಗಳ ಮಾತುಗಳೇ ಜಗತ್ತನ್ನು ಶ್ರೀಮಂತಗೊಳಿಸಿವೆ. ಮಾತಿನಿಂದ ಸ್ವರ್ಗ ಕಟ್ಟಬಹುದು. ಆ ಶ್ರೀಮಂತಿಕೆಯಲ್ಲಿ ಸಂತೋಷದಿಂದ ಬಾಳಬೇಕು. ಅಂತಹ ಮಾತುಗಳಿಗಾಗಿ ಎಲ್ಲರೂ ಒಂದೆಡೆ ಸೇರುವುದೇ ಸತ್ಸಂಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net