

ಹಾಸನ: ಮಕ್ಕಳಿಗೆ ಬೇಸಿಗೆ ರಜೆ ಎಂದರೆ ಬಹುದೊಡ್ಡ ಸಂಭ್ರಮವೇ ಸರಿ. ಪ್ರವಾಸ, ಅಜ್ಜಿ ಊರು, ಶಿಬಿರಗಳಲ್ಲಿ ಪಾಲ್ಗೊಂಡು ಮೋಜು - ಮಸ್ತಿ ಮಾಡಲು ಬೇಸಿಗೆ ರಜೆ ಮಕ್ಕಳಿಗೆ ಹೇಳಿ ಮಾಡಿಸಿದ ಸಮಯ. ಕಳೆದ ಒಂದೂವರೆ ತಿಂಗಳ ಬೇಸಿಗೆ ರಜೆ ಮುಕ್ತಾಯಗೊಂಡಿದ್ದು, ಇಂದಿನಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆರಂಭವಾಗಲಿವೆ. ಒಂದೂವರೆ ತಿಂಗಳ ರಜೆ ಮುಗಿಸಿ, ಒಂದು ತರಗತಿಯಿಂದ ತೇರ್ಗಡೆ ಹೊಂದಿ ಮುಂದಿನ ತರಗತಿಗೆ ಬರುವ ಮಕ್ಕಳ ಸ್ವಾಗತಕ್ಕೆ ಇಡೀ ಜಿಲ್ಲೆಯ ಸರ್ಕಾರಿ ಶಾಲೆಗಳು ಸಜ್ಜಾಗಿವೆ.
ಜಿಲ್ಲೆಯಲ್ಲಿ 241 ಪ್ರೌಢಶಾಲೆಗಳು ಹಾಗೂ 2,242 ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿವೆ. ರಜೆ ಮುಗಿಸಿಕೊಂಡು ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಲು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಾಲೆಯನ್ನು ಸ್ವಚ್ಛಗೊಳಿಸಿ, ತಳಿರು- ತೋರಣಗಳಿಂದ ಸಿಂಗರಿಸಿ ಮೇ 31ರಿಂದ ಶಾಲೆಗೆ ಬರುವ ಬರುವ ಮಕ್ಕಳಿಗೆ ಗುಲಾಬಿ ಹೂ ಹಾಗೂ ಸಿಹಿ ತಿನಿಸು ನೀಡಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ಪಠ್ಯಪುಸ್ತಕ, ಸಮವಸ್ತ್ರಗಳು ಆಯಾ ಶಾಲೆ ತಲುಪಿದ್ದು, ಪ್ರಾರಂಭೋತ್ಸವದ ದಿನವೇ ಎಲ್ಲ ಮಕ್ಕಳಿಗೂ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಹಂಚಿಕೆ ಮಾಡಲಾಗುತ್ತದೆ. ಶಾಲೆಗೆ ಮಕ್ಕಳು ದಾಖಲಾದ ನಂತರ ಪ್ರತಿಯೊಬ್ಬರಿಗೂ ಆರೋಗ್ಯ ಪರೀಕ್ಷೆ ಮಾಡಲಾಗುತ್ತದೆ. ಶಾಲೆಗಳಲ್ಲಿ ಪ್ರತಿ ತಿಂಗಳು ವಿಶಿಷ್ಟ ಶೈಕ್ಷಣಿಕ ಆಚರಣೆಗಳನ್ನು ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಮಿಂಚಿನ ಸಂಚಾರ ಕಾರ್ಯಕ್ರಮ
ಶಿಕ್ಷಕರು ಶಾಲೆಗಳನ್ನು ಯಾವ ರೀತಿ ಸಜ್ಜುಗೊಳಿಸಿದ್ದಾರೆ. ಮಕ್ಕಳನ್ನು ಹೇಗೆ ಸ್ವಾಗತಿಸಲಿದ್ದಾರೆ ಎಂಬುದನ್ನು ಪರಿಶೀಲಿಸಲು ಡಿಡಿಪಿಐ, ಆಯಾ ತಾಲೂಕು ಬಿಇಒಗಳು ಹಾಗೂ ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ‘ಮಿಂಚಿನ ಸಂಚಾರ’ ನಡೆಸುವ ಮೂಲಕ ಪರಿಶೀಲನೆ ನಡೆಸಲಿದ್ದಾರೆ. ತಮ್ಮ ತಮ್ಮ ವ್ಯಾಪ್ತಿಯ ಬಹುತೇಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಜತೆ ಸಂವಾದ ನಡೆಸುವುದು, ಶಾಲೆಯ ಪ್ರಾರಂಭೋತ್ಸವದ ವೈಖರಿಯನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವರ್ಷ 1ರಿಂದ 10 ತರಗತಿವರೆಗೆ 2.17 ಲಕ್ಷ ವಿದ್ಯಾರ್ಥಿಗಳು ಇದ್ದರು. ಈ ವರ್ಷ ಕೂಡ ಅಷ್ಟೇ ಪ್ರಮಾಣದ ವಿದ್ಯಾರ್ಥಿಗಳು ದಾಖಲಾಗಲಿದ್ದಾರೆ. ಮೇ 29ರಿಂದ ಜೂ.3ರವರೆಗೆ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆದುಕೊಂಡು ಬರುವುದು ಹಾಗೂ ಮನೆ- ಮನೆಗಳಿಗೆ ತೆರಳಿ ಶಾಲೆಗೆ ಸೇರಬೇಕಾದ ಮಕ್ಕಳನ್ನು ಕರೆದುಕೊಂಡು ಬಂದು ದಾಖಲಾತಿ ಮಾಡುವ ಕೆಲಸವನ್ನು ಸಹ ಮಾಡಲಾಗುತ್ತದೆ. ಆಯಾ ಶಾಲಾ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ಗಳನ್ನು ಹಾಕುವ ಮೂಲಕ ದಾಖಲಾತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಡಿಡಿಪಿಐ ಪ್ರಕಾಶ್ ಅವರು ವಿಜಯವಾಣಿಗೆ ತಿಳಿಸಿದರು.
ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಇಂದು ಶಿಕ್ಷಕರು ತೆರಳಿ ಶಾಲೆಯನ್ನು ಸ್ವಚ್ಛಗೊಳಿಸಿ, ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ 1426 ಸರ್ಕಾರಿ ಶಾಲೆ ಶಿಕ್ಷಕರ ಕೊರತೆ ಇದೆ. ಕಲಿಕೆಯಲ್ಲಿ ಮಕ್ಕಳು ಹಿಂದುಳಿಯಬಾರದು ಎಂದು ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಶಾಲೆಗಳಿಗೆ 721 ಅತಿಥಿ ಶಿಕ್ಷಕರು ಹಾಗೂ ಪ್ರೌಢಶಾಲೆಗೆ 234 ಅತಿಥಿ ಶಿಕ್ಷಕರು ಸೇರಿ ಒಟ್ಟು 955 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರೆಲ್ಲರೂ ಸಹ ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಕೆ. ಪ್ರಕಾಶ್
ಡಿಡಿಪಿಐ ಹಾಸನ
ಅರಕಲಗೂಡು ತಾಲೂಕಿನಲ್ಲಿ 23 ಸಾವಿರ ವಿದ್ಯಾರ್ಥಿಗಳಿದ್ದು, ಮೇ 31ರಿಂದ ಮಕ್ಕಳು ಶಾಲೆಗೆ ಬರಲಿದ್ದಾರೆ. ಇಂದಿನಿಂದ ಎರಡು ದಿನಗಳ ಕಾಲ ಶಾಲೆ ಸ್ವಚ್ಛತೆ ಹಾಗೂ ಪಾತ್ರೆಗಳ ಸ್ವಚ್ಛತೆ ಮಾಡಿಕೊಳ್ಳಲಾಗುತ್ತದೆ. ಪ್ರಾರಂಭೋತ್ಸವದ ದಿನ 31ರಂದು ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ನೀಡಿ ಸ್ವಾಗತಿಸಲಾಗುತ್ತದೆ.
ದೇವರಾಜು
ಬಿಇಒ, ಅರಕಲಗೂಡು
ಸೋಮವಾರದಿಂದ ಶಾಲೆ ಪ್ರಾರಂಭವಾಗಲಿದ್ದು, ಮೊದಲು ಶಾಲೆಯನ್ನು ಸ್ವಚ್ಛಗೊಳಿಸಲಾಗುವುದು. ಪ್ರತಿ ತರಗತಿಯ ಕೊಠಡಿಗಳು, ಕುಡಿಯುವ ನೀರು, ಅಡುಗೆ ಮನೆ ಮತ್ತು ನೀರಿನ ಟ್ಯಾಂಕುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ನಂತರ ಈ ವರ್ಷ ಶಾಲೆಯಲ್ಲಿ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಮೊದಲು ಶಿಕ್ಷಕರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಹಿಂದಿನ ವರ್ಷ ಫಲಿತಾಂಶ ಮತ್ತು ಲೋಪ ದೋಷಗಳನ್ನು ಈ ಬಾರಿ ಸರಿಪಡಿಸಿಕೊಂಡು ಹೆಚ್ಚಿನ ಫಲಿತಾಂಶದ ಬಗ್ಗೆ ಗಮನ ಹರಿಸಲಾಗುವುದು. ಕೆಲ ವಿದ್ಯಾರ್ಥಿಗಳು ಇಂದು ಶಾಲೆಗೆ ಆಗಮಿಸುತ್ತಾರೆ. ಆದರೆ ಮೇ 31ರಂದು ಶಾಲಾ ಹಬ್ಬ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳೆಲ್ಲರಿಗೂ ಸಿಹಿ ಊಟ ನೀಡಿ ಅವರನ್ನು ಬರಮಾಡಿಕೊಳ್ಳಲಾಗುವುದು.
ಎಚ್.ಜಿ. ಮಲ್ಲೇಗೌಡ
ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ ಮೇಗಲಕೇರಿ
ಚನ್ನರಾಯಪಟ್ಟಣ
ನಮ್ಮ ಶಾಲೆ ಸತತ ಐದು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಶಾಲೆಯಾಗಿ ಗುರುತಿಸಿಕೊಂಡಿದೆ. ಈ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಉತ್ತಮವಾಗಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗುವುದು. ಅಲ್ಲದೇ ಗ್ರಾಮದ ಅಕ್ಕಪಕ್ಕದ ಎಚ್‌ಪಿಎಸ್ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳನ್ನು ನಮ್ಮ ಶಾಲೆಗೆ ದಾಖಲಿಸಿಕೊಳ್ಳುವ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಯ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ.
ಡಿ. ಜ್ಯೋತಿ
ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ನಿಟ್ಟೂರು
ಹಾಸನ ತಾಲೂಕು