ನಾಳೆಯಿಂದ ಮೂರು ದಿನ ಅದ್ದೂರಿ ಕಿತ್ತೂರು ಉತ್ಸವ

22-33
Published on

ಬೆಳಗಾವಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಚನ್ನಮ್ಮನ ಕಿತ್ತೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ’ಚನ್ನಮ್ಮನ ಕಿತ್ತೂರ ಉತ್ಸವ-2022’ ಕಾರ್ಯಕ್ರಮನ್ನು ಅ.23 ರಂದು ಸಂಜೆ 7 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.
ಮೊದಲ ಬಾರಿಗೆ ಚನ್ನಮ್ಮನ ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವಾಗಿ ಆಚರಿಸಲಾಗುತ್ತಿರುವುದು ವಿಶೇಷವಾಗಿದ್ದು, ಅ. 23, 24 ಹಾಗೂ 25 ರಂದು ಮೂರು ದಿನಗಳವರೆಗೆ ಜರುಗಲಿರುವ ಈ ಉತ್ಸವದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮುಖ್ಯ ವೇದಿಕೆ ಹಾಗೂ ರಾಜಾ ಮಲ್ಲಸರ್ಜ ವೇದಿಕೆ ಮತ್ತು ಸಂಗೊಳ್ಳಿ ರಾಯಣ್ಣ ವೇದಿಕೆಗಳಲ್ಲಿ ಮೂರು ದಿನಗಳವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅ.23ರಂದು ಬೆಳಗ್ಗೆ 8.30ಕ್ಕೆ ರಾಣಿ ಚನ್ನಮ್ಮನ ತವರೂರು ಕಾಕತಿಯಲ್ಲಿ ಚನ್ನಮ್ಮನ ಮೂರ್ತಿಗೆ ಪೂಜೆ ನೆರವೇರಲಿದೆ. ಬಳಿಕ ಮುಖ್ಯ ವೇದಿಕೆಯಲ್ಲಿ ರಾಜ್ಯಮಟ್ಟದ ಐತಿಹಾಸಿಕ ’ಚನ್ನಮ್ಮನ ಕಿತ್ತೂರು ಉತ್ಸವ-2022’ ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತ ಸೌಧ ಕಟ್ಟಡದ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಿಲಾನ್ಯಾಸವನ್ನೂ ನೆರವೇರಿಸಲಿದ್ದಾರೆ. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಕಂದಾಯ ಸಚಿವ ಆರ್.ಅಶೋಕ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಪ್ರವಾಸೋದ್ಯಮ, ಸಚಿವ ಆನಂದ್ ಸಿಂಗ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರಗೇಶ್ ಆರ್. ನಿರಾಣಿ, ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ, ಕೃಷಿ ಸಚಿವ ಬಿ.ಸಿ.ಪಾಟೀಲ, ನಗರಾಭಿವೃದ್ಧಿ ಸಚಿವ ಬಿ. ಎ.ಬಸವರಾಜ (ಬೈರತಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲಕುಮಾರ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಆಚಾರ ಹಾಲಪ್ಪ ಬಸಪ್ಪ, ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ, ತೋಟಗಾರಿಕೆ ಸಚಿವ ಮುನಿರತ್ನ, ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.

ಅ.23ರಂದು ಬೆಳಗ್ಗೆ 9ಗಂಟೆಗೆ ಕಿತ್ತೂರಿನ ಗಡಾದಿಮರಡಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಿತ್ತೂರಿನ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ವಿಜಯಜ್ಯೋತಿಗೆ ಸ್ವಾಗತ ಹಾಗೂ ಸಂಸ್ಥಾನದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಕಿತ್ತೂರಿನ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸುನೀಲಕುಮಾರ್ ಅವರು ಜಾನಪದ ಕಲಾವಾಹಿನಿ ಉದ್ಘಾಟಿಸಲಿದ್ದಾರೆ.

ಬೆಳಗ್ಗೆ 11ಗಂಟೆಗೆ ಕಿತ್ತೂರಿನ ಎಂಪಿಎಂಸಿ ಪ್ರಾಂಗಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ ನಿರಾಣಿ ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕಿತ್ತೂರಿನ ತುಂಬುಗೆರೆಯಲ್ಲಿ ಕ್ರೀಡೆ ಮತ್ತು ದೋಣಿ ವಿಹಾರಕ್ಕೆ ಸಚಿವ ಆನಂದ್ ಸಿಂಗ್ ಚಾಲನೆ ನೀಡಲಿದ್ದಾರೆ.

ಕಿತ್ತೂರು ರಾಣಿ ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ಅ.23ರಂದು ಇಡೀ ದಿನ ಸಂಗೀತ, ಗಾಯನ, ನೃತ್ಯ, ನಾಟಕ, ಹಾಸ್ಯ ಸೇರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾಜಾ ಮಲ್ಲಸರ್ಜ ವೇದಿಕೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ಹಾಸ್ಯ ಕಲಾವಿದರ ತಂಡದಿಂದ ಹಾಸ್ಯದ ಹೊನಲು ಹಾಗೂ ಸಾಕ್ಷಿ ಕಲ್ಲೂರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮತ್ತು ಸ್ಥಳೀಯ ಕಲಾವಿದರಿಂದ ಜಾನಪದ ಸಂಗೀತ, ಡೊಳ್ಳಿನ ಪದ, ತತ್ವಪದ, ರಂಗಗೀತೆ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೆ, ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಸ್ಥಳೀಯ ಗಾಯಕರು ಭಜನಾ ಪದ, ತತ್ತ್ವ ಪದ, ಗೀಗಿ ಪದ ಪ್ರಸ್ತುತಪಡಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net