ನಾಳೆಯಿಂದ ಮುಳಬಾಗಿಲಿನಲ್ಲಿ ಕನ್ನಡ ಡಿಂಡಿಮ : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

Published on
ಸಮ್ಮೇಳನ ಆಯೋಜಿಸಿರುವ ಕ್ರೀಡಾಂಗಣ.
ಸಮ್ಮೇಳನ ಆಯೋಜಿಸಿರುವ ಕ್ರೀಡಾಂಗಣ.

ಮುಳಬಾಗಿಲು
ನೇತಾಜಿ ಕ್ರೀಡಾಂಗಣದಲ್ಲಿ ಫೆ.14, 15ರಂದು ಕೋಲಾರ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮಂಡಿಕಲ್​ನವರಾದ ಸಾಹಿತಿ ಡಾ.ಜೆ.ಬಾಲಕೃಷ್ಣ ಅವರ ಸರ್ವಾಧ್ಯಕ್ಷತೆಯಲ್ಲಿ ಕನ್ನಡ ಭಾಷೆ, ನೆಲ, ಜಲ ಹಾಗೂ ಕೋಲಾರ ಮಣ್ಣಿನ ಕುರಿತು ಚಿಂತನ ಮಂಥನ ನಡೆಯಲಿದೆ.
14ರಂದು ಬೆಳಗ್ಗೆ 8.30ಕ್ಕೆ ತಹಸೀಲ್ದಾರ್​ ವೈ.ರವಿ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಎನ್​.ಬಿ.ಗೋಪಾಲಗೌಡ ಪರಿಷತ್​ ಧ್ವಜಾರೋಹಣ ಹಾಗೂ ನಗರಸಭಾ ಅಧ್ಯಕ್ಷ ರಿಯಾಜ್​ ಅಹಮದ್​ ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಪಲ್ಲಕ್ಕಿಯಲ್ಲಿ ಭುವನೇಶ್ವರಿದೇವಿ ಮೆರವಣಿಗೆ ನಡೆಯಲಿದೆ. ಸಮ್ಮೇಳನಾಧ್ಯಕ್ಷ ಡಾ.ಬಾಲಕೃಷ್ಣ ಪಾದಯಾತ್ರೆ ಮೂಲಕವೇ ಸಾಗಲಿದ್ದು, ಶಾಸಕ ಎಚ್​.ನಾಗೇಶ್​ ಚಾಲನೆ ನೀಡಲಿದ್ದಾರೆ. ನಗರದ ಅಂಬೇಡ್ಕರ್​ ವೃತ್ತದಲ್ಲಿ ಪ್ರತಿಮೆಗೆ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಮೆರವಣಿಗೆ ನೇತಾಜಿ ಕ್ರೀಡಾಂಗಣದ ಪ್ರಧಾನ ವೇದಿಕೆಗೆ ಆಗಮಿಸಲಿದೆ.
10.30ಕ್ಕೆ ರಾಜ್ಯಸಭಾ ಸದಸ್ಯ ಎಲ್​.ಹನುಮಂತಯ್ಯ ಅವರು ಡಾ.ಡಿ.ವಿ.ಗುಂಡಪ್ಪ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಎನ್​.ಬಿ.ಗೋಪಾಲಗೌಡ ಆಶಯ ನುಡಿ, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್​ ಜೋಶಿ ಮಾತನಾಡಲಿದ್ದಾರೆ. ಶಾಸಕ ಎಚ್​.ನಾಗೇಶ್​ ಮಹಾದ್ವಾರ, ವಿಧಾನ ಪರಿಷತ್​ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ ಪುಸ್ತಕ ಮಳಿಗೆ, ಡಿ.ಸಿ.ವೆಂಕಟ್​ರಾಜಾ ಸಾಂಸತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಟಿಎಪಿಸಿಎಂಎಸ್​ ಅಧ್ಯಕ್ಷ ಕೊತ್ತೂರು ಜಿ.ಮಂಜುನಾಥ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ಯುಕೇಶ್​ಕುಮಾರ್​, ಎಸ್ಪಿ ಎಂ.ನಾರಾಯಣ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಸಾಹಿತಿ ಡಾ.ವಿ.ಮುನಿವೆಂಕಟಪ್ಪ ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ, ಲ್ಮಪತಿ ಕೋಲಾರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಎರಡನೇ ದಿನದ ಕಾರ್ಯಕ್ರಮಗಳು: 15ರಂದು ಬೆಳಗ್ಗೆ 9.30ರಿಂದ ಉತ್ತನೂರು ರಾಜಮ್ಮ ವೇದಿಕೆಯಲ್ಲಿ ಡಾ.ನಟರಾಜ್​ ಬೂದಾಳ್​ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಂಸತಿ, ಸಹಬಾಳ್ವೆಯ ವಿಚಾರಗೋಷ್ಠಿ ನಡೆಯಲಿದೆ. ಬೆಳಗ್ಗೆ 11ರಿಂದ 11.45ರವರೆಗೆ "ಕರ್ನಾಟಕ ಶಿಕ್ಷಣ ನೀತಿಯ ಬಿಕ್ಕಟ್ಟುಗಳು' ಎಂಬ ವಿಶೇಷ ಉಪನ್ಯಾಸವನ್ನು ಪಿ.ವಿ.ನಿರಂಜನಾರಾಧ್ಯ ನೀಡಲಿದ್ದಾರೆ. ಮಧ್ಯಾಹ್ನ 12 ರಿಂದ 1.30ರವರೆಗೂ ಡಾ.ಕೆ.ವೈ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕು&ಬರಹ ಉಪನ್ಯಾಸ ನಡೆಯಲಿದೆ.
ಸಂಜೆ 4.30ಕ್ಕೆ ಪ್ರಧಾನ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನದ ಸಮಾರೋಪ ನಡೆಯಲಿದೆ. ಬೆಂಗಳೂರು ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಡಿ.ಡೋಮಿನಿಕ್​, ಸಮ್ಮೇಳನಾಧ್ಯಕ್ಷ ಡಾ.ಜೆ.ಬಾಲಕೃಷ್ಣ, ಸಂಸದ ಎಸ್​.ಮುನಿಸ್ವಾಮಿ, ಜೆಡಿಎಸ್​ ಮುಖಂಡ ಸಮೃದ್ಧಿ ವಿ.ಮಂಜುನಾಥ್​ ಪಾಲ್ಗೊಳ್ಳಲಿದ್ದಾರೆ.

ಸಂವೇದನಾಶೀಲ ಲೇಖಕ: ಸಾಹಿತಿ ಡಾ.ಜೆ.ಬಾಲಕೃಷ್ಣ ಅವರು ಮಂಡಿಕಲ್​ನವರು. ಲೇಖಕರಾಗಿ, ಅನು ವಾದಕರಾಗಿ, ವ್ಯಂಗ್ಯಚಿತ್ರಕಾರ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಬಹುಮುಖ ಪ್ರತಿಭೆ. ಬೆಂಗಳೂರಿನ ಕೃಷಿ ವಿವಿಯ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಇವರು, ಕೃಷಿ ವಿಜ್ಞಾನದಲ್ಲಿ ಸ್ನಾತಕ ಪದವಿ, ಕೃಷಿ ಸೂಕ್ಷ$್ಮಜಿವಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕನ್ನಡದ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪದವಿ ಪಡೆದಿದ್ದಾರೆ.
ಕೃತಿಗಳು: "ನೆನಪುಗಳಿಗೇಕೆ ಸಾವಿಲ್ಲ?' (ಕಥಾ ಸಂಕಲನ), "ಕನಸೆಂಬ ಮಾಯಾಲೋಕ, "ಮಿಥುನ' (ಮನೋವಿಜ್ಞಾನದ ಬರಹಗಳು), "ಮಾತಾಹರಿ', "ಮಳೆಬಿಲ್ಲ ನೆರಳು' (2012ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅತ್ಯುತ್ತಮ ವಿಜ್ಞಾನ ಪುಸ್ತಕ ಪ್ರಶಸ್ತಿ ವಿಜೇತ ಕೃತಿ), ನಡೆದಷ್ಟು ದೂರ (ಪ್ರವಾಸ ಕಥನ), "ವ್ಯಂಗ್ಯಚಿತ್ರ&ಚರಿತ್ರೆ', "ಮೌನ ವಸಂತ'(ಮಹಿಳಾ ಕಥನಗಳು), "ಕೃಷಿ ವಿಜ್ಞಾನ ಸಾಹಿತ್ಯ ನಡೆದುಬಂದ ಹಾದಿ' (ಅಧ್ಯಯನ) ಕೃತಿ ರಚಿಸಿದ್ದಾರೆ. "ಜೀವತಂತ್ರಜ್ಞಾನ & ಅರ್ಥ ವಿವರಣಾ ಕೋಶ', "ಕೃಷಿ ವಿಜ್ಞಾನ ತಾಂತ್ರಿಕ ಪದಕೋಶ', "ಆಡಳಿತ ಪದಕೋಶ'ಗಳನ್ನು ಬಾಲಕೃಷ್ಣ ಅವರು ರಚಿಸಿದ್ದಾರೆ. ಅನುವಾದಿತ ಕೃತಿಗಳು: "ನೀನೆಂಬ ನಾನು& ಸೂಫಿ ಎಂಬ ಮಾನಸಿಕ ಅವಸ್ಥೆ ಮತ್ತು ಸೂಫಿ ಕತೆಗಳು', "ಬೊಕಾಷಿಯೋನ ರಸಿಕತೆಗಳು', "ಮಾಂಟೋ ಕತೆಗಳು', "ಪುಟ್ಟರಾಜಕುಮಾರ', "ನಮ್ಮ ನಿಮ್ಮೊಳಗೊಬ್ಬ ನಸ್ರುದ್ದೀನ್​', "ಬೌದ್ಧಿಕ ಆಸ್ತಿ ಹಕ್ಕು ಮತ್ತು ಸಾಂಪ್ರದಾಯಕ ಜ್ಞಾನ', "ಗ್ರಾಮ್ಯಧ್ವನಿಗಳು', "ನಡು ಮಧ್ಯಾಹ್ನದ ಚಂದ್ರ, ಇತರ ಕತೆಗಳು' ಹಾಗೂ "ಮನೆಯೇ ಇಲ್ಲದ ಬಾಗಿಲು & ಮುಲ್ಲಾ ನಸ್ರುದ್ದೀನ್​ ಕತೆಗಳು'. ಇವರ ವ್ಯಂಗ್ಯ ಚಿತ್ರಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net