

ಬನ್ನೂರು: ಬನ್ನೂರು ಗ್ರಾಮದ ಅಧಿದೇವತೆ ಹೇಮಾದ್ರಂಭ ದೇವಿಯ ಜಾತ್ರಾ ಮಹೋತ್ಸವ ಫೆ.3 ರಿಂದ ಆರಂಭವಾಗಲಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಜತೆಗೆ ಮಾಂಸಾಹಾರವನ್ನು ಸಂರ್ಪೂಣವಾಗಿ ನಿಷೇಧಿಸಲಾಗಿದೆ.
ಪಟ್ಟಣದ ಅಧಿದೇವತೆ ಹೇಮಾದ್ರಂಭ ಜಾತ್ರೆ ಸುತ್ತಮುತ್ತ ಪ್ರಸಿದ್ಧಿ ಪಡೆದುಕೊಂಡಿದ್ದು, ಜಾತ್ರೆಯಲ್ಲಿ ನಡೆಯುವ ಬಂಡಿ ಉತ್ಸವ, ರಥೋತ್ಸವ, ತೆಪ್ಪೋತ್ಸವ ಆಕರ್ಷಣೀಯವಾಗಿರುತ್ತದೆ.
ಹಬ್ಬದ ಪ್ರಮುಖ ವಿಶೇಷತೆಗಳಲ್ಲಿ ಒಂದು ಮಾಂಸಾಹಾರ ತ್ಯಜಿಸುವುದು. ಹೇಮಾದ್ರಂಭ ದೇವಿಯು ಬಹಳ ಮಡಿವಂತಿಕೆಗೆ ಹೆಸರುವಾಸಿ. ದೇವಿಯನ್ನು ಊರಿಗೆ ತರುವ ಮುನ್ನವೇ ಇಡೀ ಊರಿನಲ್ಲಿ ಮಾಂಸಾಹಾರ ಸೇವಿಸುವುದನ್ನು ಜನರು ತ್ಯಜಿಸಿದ್ದರು. ರಥಸಪ್ತಮಿಯಂದು ಕರಿಕಲ್ಲುಗಳಿಗೆ ಪೂಜೆ ಸಲ್ಲಿಸಿದ ನಂತರ ಇಡೀ ಊರಿನಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ.ಹಬ್ಬವನ್ನು ಎಲ್ಲ ವರ್ಗದವರು ಸೇರಿ ಆಚರಿಸುವುದರಿಂದ ಸುತ್ತಮುತ್ತಲಿನ ಗ್ರಾಮದವರು ಪಾಲ್ಗೊಂಡು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮದ ಮುಖಂಡರಿಗೆ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ವೀಳ್ಯದೆಲೆಯನ್ನು ನೀಡಿ ಹಬ್ಬಕ್ಕೆ ಆಹ್ವಾನ ನೀಡಲಾಗುತ್ತದೆ.
ಪಟ್ಟಣ ಸಮೀಪದ ಕಾವೇರಿ ನದಿಯಲ್ಲಿ ದೇವಿಯನ್ನು ಅವಭೃತ ಸ್ನಾನಕ್ಕಾಗಿ ಕರೆದುಕೊಂಡು ಹೋಗುವುದು ಹಿಂದಿನಿಂದಲೂ ನಡೆದುಬಂದ ಪ್ರತೀತಿಯಾಗಿದೆ. ದೇವಿಯನ್ನು ಕರೆತಂದ ಸಂದರ್ಭದಲ್ಲಿ ದೇವಿಯ ತೊಟ್ಟಿಲಿನ ಒಳಭಾಗದಲ್ಲಿ ನುಗ್ಗಲು ಇಲ್ಲಿ ಜನಜಂಗುಳಿಯೇ ನೆರೆಯುತ್ತದೆ. ತೊಟ್ಟಿಲಿನ ಒಳಭಾಗದಲ್ಲಿ ನುಗ್ಗಿದರೆ ಸಕಲ ಪಾಪಗಳು ನಾಶವಾಗುತ್ತವೆ ಎನ್ನುವ ನಂಬಿಕೆಯಿಂದ ಕಾವೇರಿ ಮಡುವಿನಲ್ಲಿ ಸ್ನಾನ ಮಾಡಲು ಸಾವಿರಾರು ಜನರು ಇಲ್ಲಿ ಸೇರುತ್ತಾರೆ. ದೇವಿಯ ಅವಭೃತ ಸ್ನಾನವಾದ ಮೇಲೆ ಭಕ್ತರು ಪುಣ್ಯಸ್ನಾನ ಮಾಡಿ ಪುನೀತರಾಗುತ್ತಾರೆ.
ಹಬ್ಬದಲ್ಲಿ ಹೆಚ್ಚಿನ ಆಕರ್ಷಣೆಯನ್ನು ಹೊಂದಿರುವುದು ಬಂಡೀ ಉತ್ಸವ. ರತ್ನಮಹಲ್ ಮುಂಭಾಗದಲ್ಲಿ ನಡೆಯುವ ಬಂಡಿ ಓಟ ನೋಡಲು ಜನರು ಸೇರುತ್ತಾರೆ. ಓಟಕ್ಕೆಂದೇ ಬಂಡಿಯನ್ನು ಸಿಂಗರಿಸಿಕೊಂಡು ಎತ್ತುಗಳನ್ನು ಕಟ್ಟಿ ವೇಗವಾಗಿ ಓಡಿಸಲಾಗುತ್ತದೆ. ಪ್ರತಿಯೊಂದು ಓಟದಲ್ಲೂ ಇಬ್ಬರು ನುರಿತರು ಎತ್ತುಗಳೊಂದಿಗೆ ಓಡುತ್ತಾರೆ.