ನಾಳೆಯಿಂದ ಪಪೂ ಕಾಲೇಜುಗಳ ಕ್ರೀಡಾಕೂಟ

24-pnp 2
Published on

ಪಾಂಡವಪುರ: ಪಟ್ಟಣದ ಜಯಂತಿನಗರದಲ್ಲಿರುವ ಶ್ರೀ ಶಂಭುಲಿಂಗೇಶ್ವರ ಎಂಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಆ.26, 27 ಮತ್ತು 28ರಂದು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ 2023-24 ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಪಂಚಲಿಂಗೇಗೌಡ ತಿಳಿಸಿದರು.

ತಾಲೂಕಿನಲ್ಲಿರುವ 19 ಪದವಿಪೂರ್ವ ಕಾಲೇಜುಗಳ ಪೈಕಿ ಮೂರು ಕಾಲೇಜು ಹೊರತುಪಡಿಸಿ ಉಳಿದ 16 ಕಾಲೇಜುಗಳ 800ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಹಿಸಲಿದ್ದಾರೆ. ಯುವಕ-ಯುವತಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿದೆ. ಒಟ್ಟು 20 ಅಥ್ಲೆಟಿಕ್ ಹಾಗೂ 7 ಗೇಮ್ಸ್‌ಗಳು ನಡೆಯಲಿದ್ದು, ಇದಕ್ಕಾಗಿ ಎರಡು ಆಟದ ಮೈದಾನಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಆಯ್ಕೆಯಾದ ಕ್ರೀಡಾಪಟುಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ಆ.27ರಂದು ಬೆಳಗ್ಗೆ 6.30ಕ್ಕೆ ತಾಲೂಕಿನ ಬೇಟೆತಿಮ್ಮನಕೊಪ್ಪಲು ಗ್ರಾಮದಿಂದ ಕ್ರಾಸ್‌ಕಂಟ್ರಿ ಮತ್ತು ವಾಕಿಂಗ್ ರೇಸ್ ಕೂಡ ಆಯೋಜಿಸಲಾಗಿದೆ. ಗೆದ್ದವರಿಗೆ ಪಾರಿತೋಷಕ ನೀಡಿ ಗೌರವಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅಂದು ಬೆಳಗ್ಗೆ 9.30ಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಡಿಡಿಪಿಐ ಎಸ್.ಉಮೇಶ್ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹಿತನುಡಿಗಳನ್ನಾಡಲಿದ್ದಾರೆ. ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು ಕ್ರೀಡಾಜ್ಯೋತಿ ಸ್ವೀಕರಿಸುವರು ಎಂದು ಹೇಳಿದರು.
ಸ್ಪರ್ಧಾ ವಿಜೇತರಿಗೆ 188 ಪ್ರಥಮ, 188 ದ್ವಿತೀಯ ಹಾಗೂ 32 ತೃತೀಯ ಸೇರಿದಂತೆ ಒಟ್ಟು 408 ಬಹುಮಾನಗಳು, 16 ಪಾರಿತೋಷಕ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಾಂಪಿಯನ್‌ಶಿಪ್ ಬಹುಮಾನಗಳನ್ನು ವಿತರಿಸಲಾಗುವುದು. ಕ್ರೀಡಾಪಟುಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜು ಆಡಳಿತಾಧಿಕಾರಿ ಅಕ್ಷಯ್, ಪ್ರಾಂಶುಪಾಲೆ ಆರ್.ವಿ.ಸೌಮ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net