ಚಾಮರಾಜನಗರ : ಕೊಳ್ಳೇಗಾಲ ಪಟ್ಟಣದ ಎಂ.ಜಿ.ಎಸ್.ವಿ ಕಾಲೇಜು ಆವರಣದಲ್ಲಿ ಫೆ.16ರಿಂದ 27 ರವರೆಗೆ ಭಾರತದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಹಾಗೂ 21 ಅಡಿ ಲೈಟಿಂಗ್ ಶಿವಲಿಂಗ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಲಾಗಿದೆ ಎಂದು ಮೈಸೂರಿನ ಈಶ್ವರೀಯ ವಿಶ್ವ ವಿದ್ಯಾಲಯದ ಬಿ.ಕೆ. ಪ್ರಾಣೇಶ್ ತಿಳಿಸಿದರು.
ಭಾರತದ ಪ್ರಸಿದ್ಧ ಶಿವಲಿಂಗ ಮತ್ತು ವಿವಿಧ ರಾಜ್ಯಗಳಿಂದ ತರಿಸಲಾದ 12 ಜ್ಯೋತಿರ್ಲಿಂಗಗಳ ಪುಣ್ಯ ದರ್ಶನಕ್ಕೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜಯೋಗಿನಿ ಬಿ.ಕೆ ಪ್ರಭಾಮಣಿ ಮಾತನಾಡಿ, ಸಾರ್ವಜನಿಕರು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. 21ಅಡಿ ಎತ್ತರದ ಲೈಟಿಂಗ್ ಶಿವಲಿಂಗ ಮತ್ತು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶಗಳಿಂದ ತರಿಸಲಾದ 12 ದ್ವಾದಶ ಜ್ಯೋತಿರ್ಲಿಂಗಗಳನ್ನು ಪ್ರದರ್ಶನ ಮಾಡಲಾಗುವುದು. ಈ ವೇಳೆ ಶ್ರೀಶೈಲ ಮಲ್ಲಿಕಾರ್ಜುನ, ಸೋಮನಾಥೇಶ್ವರ, ಮಹಾಕಾಳೇಶ್ವರ, ಓಂಕಾರೇಶ್ವರ, ಕೇದಾರನಾಥ, ಭೀಮಾಶಂಕರ, ರಾಮೇಶ್ವರ, ನಾಗೇಶ್ವರಂ, ವೈದ್ಯನಾಥ, ತ್ರಯಂಬಕೇಶ್ವರ, ವಿಶ್ವನಾಥೇಶ್ವರ ಲಿಂಗಗಳ ಪುಣ್ಯದರ್ಶನವನ್ನು ಭಕ್ತರ ಅನುಕೂಲಕ್ಕಾಗಿ ಇದೆ ಪ್ರಥಮ ಬಾರಿಗೆ ಹಲವು ವರ್ಷಗಳ ಬಳಿಕ ಅನುಕೂಲ ಕಲ್ಪಿಸಲಾಗಿದೆ ಎಂದರು.
ಫೆ.16ರಂದು ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ. ಮೈಸೂರು ಉಪ ವಲಯ ಮೈಸೂರು ಮುಖ್ಯ ಸಂಚಾಲಕಿ ಬಿ.ಕೆ.ಲಕ್ಷ್ಮೀ ಜೀ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಬೇಲಿ ಮಠದ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಜಯೋಗಿನಿ ಡಾ.ಬಿ.ಕೆ. ಬಸವರಾಜ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎನ್.ಮಹೇಶ್, ಮಾಜಿ ಶಾಸಕರಾದ ಪರಿಮಳಾ ನಾಗಪ್ಪ. ಎಸ್. ಬಾಲರಾಜು, ಮುಖಂಡ ಡಾ.ದತ್ತೇಶ್ ಕುಮಾರ್ ಸೇರಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈಶ್ವರೀಯ ವಿಶ್ವ ವಿದ್ಯಾನಿಲಯದ ಬಿ.ಕೆ. ಬಿಂಧು, ಬಿ.ಕೆ. ಆರಾಧ್ಯ ಇದ್ದರು.