ನಾಳೆಯಿಂದ ಜನಶತಾಬ್ದಿ ರೈಲು ಸಂಚಾರ

train
Published on

ಶಿವಮೊಗ್ಗ: ಲಾಕ್​ಡೌನ್ ಬಳಿಕ ಮಲೆನಾಡಿನಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ ಎರಡೂವರೆ ತಿಂಗಳ ಬಳಿಕ ಆರಂಭಗೊಳ್ಳಲಿದ್ದು, ಬೆಂಗಳೂರಿನಿಂದ ಜೂ.1ರ ರಾತ್ರಿ 10ಕ್ಕೆ ಶಿವಮೊಗ್ಗ ಮುಖ್ಯ ರೈಲು ನಿಲ್ದಾಣಕ್ಕೆ ಜನಶತಾಬ್ದಿ ರೈಲು ಆಗಮಿಸಲಿದೆ.

ಈಗಾಗಲೇ ಆನ್​ಲೈನ್ ಮೂಲಕ ಟಿಕೆಟ್ ಬುಕಿಂಗ್ ಆಗಿದ್ದು ಜೂ.1ರ ಸಂಜೆ 5.30ಕ್ಕೆ ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಿಂದ ಜನಶತಾಬ್ದಿ ಹೊರಡಲಿದೆ. ಮರುದಿನ ಜೂ.2ರ ಬೆಳಗ್ಗೆ 5.30ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲಿದೆ.

ತಾತ್ಕಾಲಿಕವಾಗಿ ಉಭಯ ನಗರಗಳ ನಡುವೆ ಜನಶತಾಬ್ದಿ ರೈಲು ಮಾತ್ರ ಸಂಚರಿಸಲಿದ್ದು ಜೂ.8ರ ನಂತರ ರೈಲು ಸಂಚಾರ ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ. ಪರಸ್ಪರ ಅಂತರ ಕಾಯ್ದುಕೊಳ್ಳಬೇಕಿದ್ದರೂ ಪ್ರಯಾಣಿಕರ ಅನುಕೂಲಕ್ಕಾಗಿ ಟಿಕೆಟ್ ಶುಲ್ಕ ಹೆಚ್ಚಳ ಮಾಡಿಲ್ಲ. ಆದರೆ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ 90 ನಿಮಿಷ ಮುಂಚಿತವಾಗಿಯೇ ಬರುವಂತೆ ಸೂಚಿಸಲಾಗಿದೆ.

ಕೇವಲ ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಬೋಗಿಯಲ್ಲಿ ಕೇವಲ 54 ಮಂದಿಗೆ ಪ್ರಯಾಣಕ್ಕೆ ಅವಕಾಶವಿದ್ದು ಒಟ್ಟು 648 ಸೀಟು ಕಾಯ್ದಿರಿಸಲಾಗುತ್ತಿದೆ. ಎಸಿ ಬೋಗಿಯಲ್ಲಿ ಪ್ರಯಾಣಕ್ಕೆ ಅವಕಾಶವಿಲ್ಲ. ಇದೇ ವೇಳೆ ಭದ್ರಾವತಿ, ಕಡೂರು, ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇದ್ದು, ರೈಲು ಹತ್ತುವುದಕ್ಕಿಂತ ಪೂರ್ವದಲ್ಲಿ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ನಡೆಸಲು ಇಲಾಖೆ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net