

ಚಿಕ್ಕೋಡಿ, ಬೆಳಗಾವಿ: ಹಾನಗಲ್ಲ ಕುಮಾರ ಶಿವಯೋಗಿಗಳ 155ನೇ ಜಯಂತಿ ಮಹೋತ್ಸವವನ್ನು ಪಟ್ಟಣದಲ್ಲಿ ಸೆ.11ರಿಂದ 21ರ ವರೆಗೆ ಜನ ಜಾಗೃತಿ ಕಾರ್ಯಕ್ರಮ ಮೂಲಕ ಬಹು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಕರ್ನಾಟಕ ಸಹಕಾರ ಮಹಾಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪಾದನಾ ಚರಮೂರ್ತಿ ಮಠದ ಸಹಯೋಗದಲ್ಲಿ ನಡೆಯುವ ಸಮಾರಂಭದಲ್ಲಿ 11 ದಿನಗಳ ಕಾಲ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನದರ್ಶನ ಪ್ರವಚನ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ.11ರಿಂದ 21ರವರೆಗೆ ಪ್ರತಿದಿನ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬೆಳಗಿನ ಜಾವದ ಸದ್ಭಾವ ಪಾದಯಾತ್ರೆ ಸೇರಿ ಚಿಕ್ಕೋಡಿ ತಾಲೂಕಿನ ಕರೋಶಿ ಸೇರಿ ಕುಪ್ಪಾಣವಾಡಿಯವರೆಗೆ 23 ಗ್ರಾಮಗಳಲ್ಲಿ ಧರ್ಮಜಾಗೃತಿ ಪಾದಯಾತ್ರೆಯನ್ನು ಬೆಳಗ್ಗೆ 10ರಿಂದ 1 ಗಂಟೆಯವರೆಗೆ ಆಯೋಜಿಸಲಾಗಿದೆ ಎಂದರು.
ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಹರಿದು ಹಂಚಿಹೋಗಿದ್ದ ವೀರಶೈವ ಸಮಾಜ ಒಗ್ಗೂಡಿಸುವ ಉದ್ದೇಶಕ್ಕಾಗಿ 1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ್ದಲ್ಲದೆ, ಶಿವಯೋಗ ಮಂದಿರದ ಮೂಲಕ ನಾಡಿಗೆ ನೂರಾರು ಮಠಾಧೀಶರನ್ನು ನೀಡಿದ್ದಾರೆ. ದೇಸಿಯ ಗೋ ತಳಿ ಸಂರಕ್ಷಣೆ, ಶುದ್ಧ ವಿಭೂತಿ ತಯಾರಿಕೆ, ಕೃಷಿ, ಯೋಗ-ಶಿವಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದರು. ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಸಿಎಲ್‌ಇ ಸಂಸ್ಥೆಯ ಆವರಣದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಜೀವನ ದರ್ಶನ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದರು. ಕಾರಂಜಿಮಠದ ಡಾ. ಶಿವಯೋಗಿ ದೇವರು, ಕಮತ್ಯಾನಟ್ಟಿ ಗುರುದೇವರು ಇತರರಿದ್ದರು.