

ಹಾಸನ: ಬೇಲೂರು ತಾಲೂಕು ಅರೇಹಳ್ಳಿ ಗ್ರಾಮದ ಸ.ನಂ.13 ರ 36 ಗುಂಟೆ ಸಂತೆ ಮೈದಾನದ ಜಾಗ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಬೇಕು. ನಂತರವೇ ಹಳ್ಳಿಸಂತೆ ಮಾರುಕಟ್ಟೆ ನಿರ್ಮಾಣ ಮಾಡಬೇಕು ಹಾಗೂ ಜಿಲ್ಲಾ ಎಸ್ಪಿ ಅವರಿಗೆ ಸುಳ್ಳು ದೂರು ನೀಡಿರುವರು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಇಂದಿನಿಂದ ಒತ್ತುವರಿ ಜಾಗದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕಾರ್ಮಿಕ ಮುಖಂಡ ಧರ್ಮರಾಜು ತಿಳಿಸಿದರು.
ಅರೇಹಳ್ಳಿ ಗ್ರಾಪಂ ಜಾಗ ಒತ್ತುವರಿ ಮಾಡಿರುವುದರ ವಿರುದ್ಧ ನಾವೆಲ್ಲರೂ ಕಳದ ಒಂದೂವರೆ ವರ್ಷದಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಸ್ಥಳೀಯ ಶಾಸಕರಾಗಲೀ, ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಒತ್ತುವರಿ ಮಾಡಿರುವವರು ಯಾರು ಎಂದು ಗೊತ್ತಿದ್ದರೂ, ಪಂಚಾಯ್ತಿಯವರಾಗಲೀ, ಸಂಬಂಧಪಟ್ಟ ಅಧಿಕಾರಿಗಳಾಗಲೀ, ಸರ್ಕಾರಿ ಜಾಗ ಉಳಿಸುವ ಕೆಲಸ ಮಾಡಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿಲ್ಲ. ಈ ನಡುವೆ ಗ್ರಾಪಂ ಸದಸ್ಯ ನಾಗೇಶ್‌ಶೆಟ್ಟಿ ಇತರರು, ಸದರಿ ಗ್ರಾಪಂ ಉಳಿಸಲು ಮತ್ತು ಒತ್ತುವರಿ ತೆರವು ಮಾಡಿ ನಂತರ ಹಳ್ಳಿ ಸಂತೆಕಟ್ಟೆ ನಿರ್ಮಿಸಿ ಎಂದು ಹೋರಾಟ ಮಾಡುತ್ತಿರುವ ದಲಿತ ಹೋರಾಟಗಾರ ಅರೇಹಳ್ಳಿ ನಿಂಗರಾಜು ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಕೂಡಲೇ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಇದು ಸಮಸ್ತ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನ, ಇವರ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ತಿಳಿಸಿದರು.
ನಿಂಗರಾಜು ಮಾತನಾಡಿ, ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ. ಜಿಲ್ಲಾಧಿಕಾರಿ ಅವರು ಒಮ್ಮೆ ಬಂದು ಸ್ಥಳ ಪರಿಶೀಲನೆ ಮಾಡಿದರೆ ಎಲ್ಲರೂ ಇತ್ಯರ್ಥ ಆಗಲಿದೆ. ಅದಕ್ಕಾಗಿ ಮತ್ತೊಮ್ಮೆ ಹೋರಾಟ ಆರಂಭಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಣ್ಣಪ್ಪ, ಸಿದ್ದರಾಜು, ಪಾಲಾಕ್ಷ ಇದ್ದರು.