

ಸಾಗರ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಊರಿಗೆ ಊರೇ ಸಿಂಗಾರಗೊಂಡಿದೆ. 9 ದಿನಗಳ ಕಾಲ ನಡೆಯುವ ಜಾತ್ರೆ ತನ್ನದೇ ವಿಶಿಷ್ಟತೆಗಳಿಂದ ಕೂಡಿದ್ದು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯಲಿದ್ದಾರೆ.
ಫೆ.11ರಂದು ಜಾತ್ರೆಗೆ ‘ಅಂಕೆ’ ಹಾಕುವ ಮೂಲಕ ವಿಧಿವಿಧಾನಗಳು ಆರಂಭವಾಗಿದೆ. ಸೋಮವಾರ ರಾತ್ರಿ 10ಕ್ಕೆ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ಮುಗಿದ ಬಳಿಕ 9 ಮನೆಗಳಿಂದ ಘಟೆವು ತರಲಾಯಿತು.
18ರ ಬೆಳಗ್ಗೆ 3 ಗಂಟೆಗೆ ಗಣಪತಿ ದೇವಸ್ಥಾನದಲ್ಲಿ ತಾಳಿಪೂಜೆ ನೆರವೇರಿಸಿ ನಂತರ ಪುರೋಹಿತ ರಮೇಶ ಭಟ್ ಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಮಂಗಳವಾದ್ಯದೊಂದಿಗೆ ತಾಯಿ ಮನೆ ದೇವಸ್ಥಾನದ ಆವರಣಕ್ಕೆ ಮೆರವಣಿಗೆ ಆಗಮಿಸಲಿದೆ. ಬೆಳಗ್ಗೆ 5ಕ್ಕೆ ಶ್ರೀ ದೇವಿಗೆ ದೃಷ್ಟಿ ಇಡುವುದು ಹಾಗೂ ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ಜರುಗಲಿದೆ. ಅಂದು ರಾತ್ರಿ ಶ್ರೀ ದೇವಿಯ ದಂಡಿನ ಮೆರವಣಿಗೆ, ರಾಜಬೀದಿ ಉತ್ಸವ ನಡೆಯಲಿದೆ. ಗಂಡನ ಮನೆ ದೇವಸ್ಥಾನದಲ್ಲಿ ಆವರಣದಲ್ಲಿ 8 ದಿನಗಳ ಕಾಲ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಳೆ ಕಟ್ಟಲಿದೆ ರಾತ್ರಿಯ ಉತ್ಸವ: ಫೆ.18ರ ರಾತ್ರಿ 10ಕ್ಕೆ ಶ್ರೀ ಮಾರಿಕಾಂಬಾ ದೇವಿಯ ರಾಜಬೀದಿ ಉತ್ಸವ ನಡೆಯಲಿದೆ. ಉತ್ಸವವು ತವರುಮನೆಯಿಂದ ಆರಂಭವಾಗಿ ಅಶೋಕ ರಸ್ತೆ, ಬಿ.ಎಚ್.ರಸ್ತೆ, ಆಜಾದ್ ರಸ್ತೆ, ಮಾರ್ಕೆಟ್ ರಸ್ತೆ, ಗಂಗಾ ಪರಮೇಶ್ವರಿ ರಸ್ತೆ ಮೂಲಕ ಗಣಪತಿ ದೇವಸ್ಥಾನದ ಪಕ್ಕ, ಪಶು ವೈದ್ಯಕೀಯ ಆಸ್ಪತ್ರೆ ಎದುರು ಭಾಗದಿಂದ, ಜೆಸಿ ರಸ್ತೆ ಮುಖಾಂತರ ಗಂಡನ ಮನೆ ಗದ್ದುಗೆ ಏರಲಿದೆ.
ಉತ್ಸವದಲ್ಲಿ ಕೆಳದಿ ಕಲಾವಿದರಿಂದ ಡೊಳ್ಳು ಕುಣಿತ, ಮಂಗಳೂರಿನ ಹುಲಿವೇಷ, ಜಯರಾಮ್ ಮತ್ತು ಸಂಗಡಿಗರಿಂದ ಗಾರುಡಿ ಗೊಂಬೆ, ಸೋಮನ ಕುಣಿತ, ನಂದಿಕೋಲು, ಚಿಕ್ಕಮಗಳೂರಿನ ವೀರಗಾಸೆ, ಉಡುಪಿಯ ಗೊಂಬೆ ಕುಣಿತ, ಮೋಹನ್ ಮತ್ತು ಸಂಗಡಿಗರಿಂದ ಕೇರಳದ ಚಂಡೆನಾದ, ತಮಿಳುನಾಡಿನ ಪಂಪೆ ಕಾರ್ಯಕ್ರಮ, ಆಂಜನೇಯ ಸ್ತಬ್ಧಚಿತ್ರ, ಅಜಯ್ ಮತ್ತು ಸಂಗಡಿಗರಿಂದ ಡಿಜೆ, ಮೈಸೂರಿನ ನಗಾರಿ ಇನ್ನೂ ಮುಂತಾದ ಕಲಾತಂಡಗಳಿಂದ ರಾಜಬೀದಿ ಉತ್ಸವ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ರಥೋತ್ಸವ ಸಮಿತಿ ಸಂಚಾಲಕ ಕೆ.ಪಿ.ನವೀನ್ ತಿಳಿಸಿದ್ದಾರೆ.
ಮಳಿಗೆ ಆಕರ್ಷಣೆ: ರಸ್ತೆಯಲ್ಲಿ ಎಲ್ಲೂ ಗುಂಡಿಯನ್ನು ತೆಗೆಯದೆ ಸ್ಟೀಲ್ ರಾಡ್ಗಳನ್ನು ನಿಲ್ಲಿಸುವ ಮೂಲಕ ವ್ಯವಸ್ಥಿತ ಮಳಿಗೆ ನಿರ್ಮಾಣ ಕೆಲಸ ನಡೆದಿದೆ. ಇಡೀ ಪಟ್ಟಣದಲ್ಲಿ ಅಂಗಡಿ, ಮಳಿಗೆ, ಸರ್ಕಸ್, ಮನೋರಂಜನಾ ಆಟಿಕೆ, ಸಿಹಿತಿಂಡಿಗಳ ಅಂಗಡಿ, ಬಳೆ ಸಾಮಗ್ರಿಗಳ ಅಂಗಡಿ ಸೇರಿ ಸಾಲು ಸಾಲು ಮಳಿಗೆಗಳು ಜಾತ್ರೆಗಾಗಿ ಸಿದ್ಧಗೊಂಡಿವೆ. ಸಾಗರ ಸೇರಿ ಜಿಲ್ಲೆಯ ಎಲ್ಲ ತಾಲೂಕಿನ ಜನರು ಆಗಮಿಸಿ ಜಾತ್ರೆ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಕುಸ್ತಿ ಪಂದ್ಯಾವಳಿ ವೀಕ್ಷಣೆಗೂ ಭಾರಿ ಸಂಖ್ಯೆಯಲ್ಲಿ ಕ್ರೀಡಾಪ್ರೇಮಿಗಳು ಆಗಮಿಸುತ್ತಾರೆ. ಅದರಲ್ಲೂ ರಾಣೆಬೆನ್ನೂರು, ಗದಗ, ರೋಣ ಭಾಗದ ಜನ ಹೆಚ್ಚು ಪಾಲ್ಗೊಳ್ಳುತ್ತಾರೆ.
ಸಾಂಸ್ಕೃತಿಕ ಕಾರ್ಯಕ್ರಮ: ಸಾಗರದ ತಿಲಕ್ ರಸ್ತೆಯ ಶ್ರೀ ಮಾರಿಕಾಂಬಾ ಕಲಾವೇದಿಕೆಯಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಫೆ. 18ರಿಂದ 26ರವರೆಗೂ ಸಂಜೆ 5.30ರಿಂದ ರಾತ್ರಿವರೆಗೂ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಗೀತ, ಭರತನಾಟ್ಯ, ಕೂಚುಪುಡಿ, ಸುಗಮ ಸಂಗೀತ, ರಸಮಂಜರಿ, ಸ್ಯಾಕ್ಸೋಫೋನ್ ವಾದನ ಸೇರಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಾಂಸ್ಕೃತಿಕ ಸಮಿತಿ ಸಂಚಾಲಕ ಲೋಕೇಶ್ಕುಮಾರ್ ತಿಳಿಸಿದ್ದಾರೆ. ಸಹ ಸಂಚಾಲಕರಾಗಿ ರಾಮಚಂದ್ರ ಕಾರ್ಯನಿರ್ವಹಿಸಲಿದ್ದಾರೆ.
ಗಣಪತಿ ಕೆರೆ ಆಕರ್ಷಣೆ: ಸಾಗರದ ಗಣಪತಿ ಕೆರೆಯನ್ನು ಚೊಕ್ಕಗೊಳಿಸಲಾಗಿದ್ದು ನೋಡಲು ಆಕರ್ಷಣೀಯವಾಗಿದೆ. ಸುತ್ತಲೂ ವಿದ್ಯುತ್ ಅಲಂಕಾರ ಮಾಡಲಾಗಿದ್ದು ಮಾರಿಕಾಂಬಾ ಜಾತ್ರಾ ಸಮಿತಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಸಹ ಮಾಡಿದೆ. ಮುರುಡೇಶ್ವರದ ಸುಬ್ರಹ್ಮಣ್ಯ ಮತ್ತು ತಂಡದವರು ಇದರ ಜವಾಬ್ದಾರಿ ಹೊತ್ತಿದ್ದಾರೆ. ಕೆರೆಯ ಒಂದು ತುದಿಯಲ್ಲಿ ಕೆರೆಯಲ್ಲೇ ನಡೆದಂತೆ ಭಾಸವಾಗುವಂತೆ ವಾಕಿಂಗ್ ಪಾತ್ ವ್ಯವಸ್ಥೆ ಮಾಡಲಾಗಿದ್ದು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೆಲ್ಪಿಗಾಗಿ ಮುಗಿಬೀಳುತ್ತಿದ್ದಾರೆ.
ಭಾವಚಿತ್ರಸಹಿತ ಬ್ಯಾಡ್ಜ್ ವಿತರಣೆ: ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಆಗಮಿಸುವ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಇರುತ್ತದೆ. ಜಾತ್ರಾ ವ್ಯವಸ್ಥಾಪನಾ ಸಮಿತಿಯಿಂದ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಇರುತ್ತದೆ. ಅಲ್ಲದೆ ಸ್ಥಳೀಯ ಸಂಘ ಸಂಸ್ಥೆಗಳು ಉಚಿತ ಪಾನೀಯ, ಉಪಾಹಾರ, ಊಟದ ವ್ಯವಸ್ಥೆ ಮಾಡಿದ್ದಾರೆ. ಸಾಗರದ ವಿವಿಧ ಸಂಘ ಸಂಸ್ಥೆಗಳು ದೇವಿ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತವರಿಗೆ ತಂಪು ಪಾನೀಯ, ಮಜ್ಜಿಗೆ, ಬೆಲ್ಲ ಎಲ್ಲವನ್ನೂ ಪೂರೈಸುತ್ತಾರೆ. ಪೂಜಾ ಕಾರ್ಯದಲ್ಲಿ ತೊಡಗಿಕೊಳ್ಳುವವರಿಗೆ ಮತ್ತು ವಿವಿಧ ಸಮಿತಿಯವರಿಗೆ ಭಾವಚಿತ್ರ ಸಹಿತ ಬ್ಯಾಡ್ಜ್ಗಳನ್ನು ನೀಡಲಾಗಿದೆ.
ಇಂದು ವಸ್ತು ಪ್ರದರ್ಶನ: ಜಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಫೆ.18ರ ಸಂಜೆ 5ಕ್ಕೆ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಶಾಸಕ ಹರತಾಳು ಹಾಲಪ್ಪ ವಸ್ತು ಪ್ರದರ್ಶನ ಉದ್ಘಾಟಿಸುವರು. ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ್ಕುಮಾರ್, ಸದಸ್ಯ ಭೀಮನೇರಿ ಶಿವಪ್ಪ, ಆರ್.ಸಿ.ಮಂಜುನಾಥ್, ರಾಜಶೇಖರ ಗಾಳಿಪುರ, ಅನಿತಾಕುಮಾರಿ, ಎಸಿ ಡಾ. ಎಲ್.ನಾಗರಾಜ್, ಪೌರಾಯುಕ್ತ ರಾಜು, ತಹಸೀಲ್ದಾರ್ ಚಂದ್ರಶೇಖರ್ ನಾಯ್್ಕ ಸಿಪಿಐ ಮಹಾಬಲೇಶ್ವರ ನಾಯ್್ಕ ವಸ್ತು ಪ್ರದರ್ಶನ ಸಮಿತಿ ಸಹಸಂಚಾಲಕ ತಾರಾಮೂರ್ತಿ, ಬಾಲಕೃಷ್ಣ ಗುಳೇದ್, ಜಿ.ಬಸವರಾಜ್ ಉಪಸ್ಥಿತರಿರುವರು. ಶ್ರೀ ಮಾರಿಕಾಂಬಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು.