ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ
Published on

ಜಿಲ್ಲೆಯಲ್ಲಿ ಮಾ.31ರಿಂದ ಏ.15ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ನಡೆಯಲಿದ್ದು, 10322 ಬಾಲಕರು, 10406 ಬಾಲಕಿಯರು ಒಟ್ಟು 20,728 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 103 ರಿಪೀಟರ್ಸ್ ವಿದ್ಯಾರ್ಥಿಗಳು ಹಾಗೂ ಖಾಸಗಿ ಫ್ರೆಶರ್ಸ್ ಹಾಗೂ ರಿಪೀಟರ್ ಅಡಿಯಲ್ಲಿ ಒಟ್ಟು 471 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.
ಹಾಸನ ಜಿಲ್ಲೆಯಾದ್ಯಂತ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಒಟ್ಟು 94 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಆಲೂರು ತಾಲ್ಲೂಕಿನಲ್ಲಿ 6, ಅರಕಲಗೂಡು 9, ಅರಸೀಕೆರೆಯಲ್ಲಿ 6 , ಬೇಲೂರು 9, ಚನ್ನರಾಯಪಟ್ಟಣ 13, ಹಾಸನ 20, ಸಕಲೇಶಪುರ 9, ಹೊಳೆನರಸೀಪುರ 9, ಹಾಗೂ ಹಾಸನ ನಗರದಲ್ಲಿ ಖಾಸಗಿಯಾಗಿ ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳಿಗಾಗಿ 3 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.
ಆನೆ ಹಾವಳಿ ಪೀಡಿತ ಸಕಲೇಶಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಯಸಳೂರಿನ 24 ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರೌಢಶಾಲೆ ಯಸಳೂರಿನಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆದು ಸುರಕ್ಷಿತವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಲಾಗಿದೆ. ಪರೀಕ್ಷೆಯು ಸುವ್ಯವಸ್ಥಿತವಾಗಿ ಜರುಗುವುದನ್ನು ಖಾತ್ರಿಪಡಿಸಿಕೊಳ್ಳಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಚಕ್ಷಣ ದಳ ರಚಿಸಲಾಗಿದೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆಗಾಗಿ ಸ್ಥಾನಿಕ ಜಾಗ್ರತ ದಳದ ಅಧಿಕಾರಿ ನೇಮಕ ಮಾಡಲಾಗಿದೆ.
ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಅಪರ ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ. ಪರೀಕ್ಷೆಯನ್ನು ವ್ಯವಸ್ಥಿತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸುವಂತೆ ಪರೀಕ್ಷಾ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net