

ಹಾಸನ: ನೆಲದನಿ ಸಾಂಸ್ಕೃತಿಕ ಸಂಘ ದಿಂಡಗೂರು ಮತ್ತು ಮಾಯ್ಕ ಟ್ರಸ್ಟ್ ಹಾಗೂ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಸೆ.20ರಿಂದ ಎರಡು ದಿನಗಳ ನಾಟಕ ಉತ್ಸವ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ನಾಥಕೋತ್ಸವ ಯಶಸ್ವಿಗೊಳಿಸಬೇಕು ಎಂದು ರಂಗ ಸಂಘಟಕ ಚಲಂ ಹಾಡ್ಲಹಳ್ಳಿ ತಿಳಿಸಿದರು.
ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಎರಡು ದಿನ ನಡೆಯುವ ನಾಟಕದಲ್ಲಿ ಮೊದಲನೇ ದಿನ ಶುಕ್ರವಾರ ಪಂಚಮಪದ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮವನ್ನು ರಂಗ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಉದ್ಘಾಟಿಸಲಿದ್ದಾರೆ. ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್, ದಲಿತ ಮುಖಂಡ ಎಚ್.ಕೆ. ಸಂದೇಶ್ ಸೇರಿದಂತೆ ದಲಿತ ಸಂಘಟನೆ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸೆ.21ರಂದು ಬಾಂಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ಪ್ರದರ್ಶನವಾಗಲಿದೆ. ಎರಡು ದಿನಗಳ ಕಾಲ ನಡೆಯುವ ನಾಟಕೋತ್ಸವ ಸಂಜೆ ಆರು ಗಂಟೆಗೆ ಆರಂಭವಾಗಲಿದೆ. ನಾಟಕವನ್ನು ನೋಡಲು ಬರುವ ಪ್ರೇಕ್ಷಕರಿಗೆ ಒಬ್ಬರಿಗೆ 100 ರೂ. ದರ ನಿಗದಿ ಮಾಡಲಾಗಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ರಂಗ ಕಲಾವಿದ ಸಂತೋಷ್ ದಿಂದಗೂರು ಮಾತನಾಡಿ, ಕರ್ನಾಟಕದಲ್ಲಿ ಹೋರಾಟದ ಹಾಡುಗಳ ದೊಡ್ಡ ಪರಂಪರೆಯೇ ಇದೆ. ಪ್ರಸ್ತುತ ಪ್ರಯೋಗ ಹಾಡು, ನೆನಪು, ಮರೆತ ಇತಿಹಾಸವನ್ನು ವಿಶಿಷ್ಟ ನೇಯ್ಗೆಯಲ್ಲಿ ಬೆಸೆದು ಕಟ್ಟಿರುವ ಸಂಗೀತ ಪ್ರಯೋಗವಾಗಿದೆ. ಇದು ಹೀಗೆ ಮುಂದೆ ಆಗಲಿರುವ ಪ್ರಯೋಗಗಳ ಸರಣಿಯ ಆರಂಭದ ಬಿಂದು. ಪಂಚಮಪದ ನಾಟಕವನ್ನು ಕೆ. ಚಂದ್ರಶೇಖರ್ ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.