ನಾಳೆಯಿಂದ 7ದಿನ ಗಮಕ ಹಬ್ಬ- ಕವಿ ನಮನ

ನಾಳೆಯಿಂದ 7ದಿನ ಗಮಕ ಹಬ್ಬ- ಕವಿ ನಮನ
Published on

ಹಾಸನ: ನಗರದ ಉತ್ತರ ಬಡಾವಣೆಯಲ್ಲಿರುವ ಶ್ರೀ ಸೀತಾ ರಾಮಾಂಜನೇಯ ದೇವಾಲಯದ ಆವರಣದಲ್ಲಿರುವ ಸಪ್ತಪದಿ ಸೌದಾಮಿನಿ ಸಭಾಂಗಣದಲ್ಲಿ ಜ.5ರಿಂದ 11ರವರೆಗೂ ಗಮಕ ಹಬ್ಬ - ಕವಿ ನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷ ಕಲಾಶ್ರೀ ಗಣೇಶ್ ಉಡುಪ ತಿಳಿಸಿದರು.
ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಹಾಸನ, ಶ್ರೀ ಸೀತಾ ರಾಮಾಂಜನೇಯ ಸೇವಾ ಸಮಿತಿ, ಸಂಸ್ಕಾರ ಭಾರತಿ ಕರ್ನಾಟಕ, ಹಾಸನ ಜಿಲ್ಲಾ ಸಮಿತಿ ಹಾಗೂ ಹಾಸನ ನಗರ ಗೃಹ ನಿರ್ಮಾಣ ಸಹಕಾರಿ ಸಂಘ ನಿಯಮಿತ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜ.5ರ ಶುಕ್ರವಾರದಿಂದ 11ರವರೆಗೆ ಪ್ರತಿದಿನ ಸಂಜೆ 5.30 ಕ್ಕೆ ಸರಿಯಾಗಿ ಗಮಕ ಹಬ್ಬ - ಕವಿ ನಮನ ಕಾರ್ಯಕ್ರಮ ನಡೆಯಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶುಕ್ರವಾರ ಸಂಜೆ 5.30ಕ್ಕೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾವ್ಯ ನಾಡೋಜ ಡಾ. ಬಿ.ವಿ. ಸತ್ಯನಾರಾಯಣ, ಹಾಸನ ನಗರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್, ಹಾಸನ ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ. ವಿಜಯ್ ಅಂಗಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಗಮಕ ಕಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕಲಾಶ್ರೀ ಗಣೇಶ್ ಉಡುಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಏಳು ದಿನಗಳ ಕಾಲ ನಡೆಯುವ ಈ ಗಮಕ ಹಬ್ಬದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಗಮಕ ಕಲಾವಿದರು, ಏಳು ಕವಿಗಳ ಕಾವ್ಯಗಳ ಗಾಯನ ಹಾಗು ವ್ಯಾಖ್ಯಾನವನ್ನು ಪ್ರಸ್ತುತ ಪಡಿಸುವರು ಎಂದು ಹೇಳಿದರು.
ಜನವರಿ 11ರಂದು ಗುರುವಾರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ರಾಜ್ಯಾಧ್ಯಕ್ಷ ಗಮಕ ರತ್ನಾಕರ ಡಾ. ಎ.ವಿ. ಪ್ರಸನ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಸೀತಾ ರಾಮಾಂಜನೇಯ ಸೇವಾ ಸಮಿತಿಯ ಕಾರ್ಯದರ್ಶಿ ಎಂ.ವಿ. ಶ್ರೀನಿವಾಸಮೂರ್ತಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಏಳು ದಿನಗಳ ಕಾಲ ನಡೆಯುವ ಗಮಕ ಯಜ್ಞಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಇದೆ ವೇಳೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ತು ಕಾರ್ಯದರ್ಶಿ ರುಕ್ಮಿಣಿ ನಾಗೇಂದ್ರ, ಸಂಸ್ಕಾರ ಭಾರತೀಯ ಖಜಾಂಚಿ ಕುಮಾರಸ್ವಾಮಿ, ಪದಾಧಿಕಾರಿಗಳಾದ ಪೂಜಾ ರಘುನಂದನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net