ನಾಳೆಯಿಂದ 3 ದಿನ ರಾಜ್ಯಮಟ್ಟದ ಚೆಸ್ ಟೂರ್ನಿ: ಡಿಡಿಪಿಐ ಎಚ್.ಕೆ. ಪಾಂಡು ಮಾಹಿತಿ

27_HSN_01C (DDPI HK Pandu)
Published on

ಹಾಸನ: ಉಪ ನಿರ್ದೇಶಕರ ಕಚೇರಿ ಹಾಗೂ ಹೇಮಾವತಿ ನಗರದ ಎಲೈಟ್ ಸ್ಕೂಲ್ ಸಹಯೋಗದಲ್ಲಿ ಡಿ.28ರಿಂದ 30ರವರೆಗೆ 14 ವರ್ಷದೊಳಗಿನ ಬಾಲಕ, ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಎಲೈಟ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಿಡಿಪಿಐ ಎಚ್.ಕೆ. ಪಾಂಡು ತಿಳಿಸಿದರು.

ಪಂದ್ಯಾವಳಿ ಸಂಘಟಿಸಲು ಅನುಕೂಲವಾಗುವಂತೆ ಜಿಲ್ಲೆಯ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ಸುಮಾರು 35 ಜನ ನುರಿತ ದೈಹಿಕ ಶಿಕ್ಷಣ ಶಿಕ್ಷಕರನ್ನು ತೀರ್ಪುಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಹೀಗೆ ನಾಲ್ಕು ವಿಭಾಗಗಳ 34 ಶೈಕ್ಷಣಿಕ ಜಿಲ್ಲೆಗಳಿಂದ 170 ಬಾಲಕಿಯರು, 170 ಬಾಲಕರು ಭಾಗವಹಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಸನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ಮೇಲ್ವಿಚಾರಣೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಲಕರಿಗೆ ನಗರದ ಶ್ರೀ ಬಸವರಾಜೇಂದ್ರ ಪ್ರೌಢಶಾಲೆಯಲ್ಲಿ ಹಾಗೂ ಬಾಲಕಿಯರಿಗೆ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಆನಂದ ಭಾರತಿ ಪ್ರೌಢಶಾಲೆಯನ್ನು ಹೆಚ್ಚುವರಿ ವಸತಿ ವ್ಯವಸ್ಥೆಗಾಗಿ ಮೀಸಲಿಡಲಾಗಿದೆ. ವಸತಿ ವ್ಯವಸ್ಥೆ ಉಸ್ತುವಾರಿ ಮಾಡಲು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗಿದೆ. ಪಂದ್ಯಾವಳಿಯಲ್ಲಿ ಭಾಗಿಯಾಗುವ ಕ್ರೀಡಾಪಟುಗಳ ನೋಂದಣಿ ಎಲೈಟ್ ಶಾಲೆಯಲ್ಲಿ ಡಿ.28ರ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಇದಕ್ಕಾಗಿ 4 ವಿಭಾಗಗಳಿಗೂ 4 ತಂಡಗಳ ನೋಂದಣಿ ಸಮಿತಿಯನ್ನು ರಚಿಸಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇದನ್ನು ಎಲೈಟ್ ಶಾಲೆಯವರು ಹಾಗೂ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ವಹಿಸಿಕೊಂಡಿದ್ದಾರೆ ಎಂದರು

ಮೊದಲ ದಿನ 2 ಸುತ್ತು, 2ನೇ ದಿನ 4 ಮತ್ತು ಮೂರನೇ ದಿನ 4 ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಕಡೆಯ ದಿನ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಒಟ್ಟಾರೆ ಚೆಸ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಹದೇವ ಮತ್ತು ಎಲೈಟ್ ಶಾಲೆ ಆಡಳಿತಾಧಿಕಾರಿ ನಾಗರಾಜ್ ಅವರನ್ನು ಒಳಗೊಂಡಂತೆ 9 ಸದಸ್ಯರ ನ್ಯಾಯ ನಿರ್ಣಾಯಕ ಸಮಿತಿ ರಚಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಪಿಇಒ ಮಹದೇವ, ಟಿಪಿಇಒ ವೇದಣ್ಣ, ಸೂಪರಿಂಟೆಂಡೆಂಟ್ ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net