ನಾಳೆ ಹೇಮಾವತಿ ಜಲಾಶಯಕ್ಕೆ ಸಚಿವ ರಾಜಣ್ಣರಿಂದ ಬಾಗಿನ ಅರ್ಪಣೆ

ನಾಳೆ ಹೇಮಾವತಿ ಜಲಾಶಯಕ್ಕೆ ಸಚಿವ ರಾಜಣ್ಣರಿಂದ ಬಾಗಿನ ಅರ್ಪಣೆ
Published on

ಜಿಲ್ಲೆಯ ಜೀವನಾಡಿ ಹಾಗೂ ಕಾವೇರಿ ಕೊಳದ ಪ್ರಮುಖ ನದಿಯಾಗಿರುವ ಹೇಮಾವತಿ ಜಲಾಶಯಕ್ಕೆ ಬಾಗಿನ ಬಿಡದ ಬಗ್ಗೆ ಸಾಕಷ್ಟು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಡೆಗೂ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣರಿಂದ ಬಾಗಿನ ಅರ್ಪಣೆಗೆ ಕಾಲಕೂಡಿ ಬಂದಿದೆ.
ಕಳೆದ ವರ್ಷ ತೀವ್ರ ಬರಗಾಲದಿಂದ ಹೇಮಾವತಿ ಜಲಾಶಯ ಸಂಪೂರ್ಣವಾಗಿ ಬರಿದಾಗಿತ್ತು. ಆದರೆ ಈ ಬಾರಿ ವರುಣನ ಕೃಪೆಯಿಂದ ಜಲಾಶಯ ಜುಲೈ-ಆಗಸ್ಟ್ ತಿಂಗಳಿನಲ್ಲಿ ಭರ್ತಿಯಾಗಿತ್ತು. ಕಳೆದ ಎರಡು ತಿಂಗಳಿನಿಂದ ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಬಿಡದೆ ಇರುವ ಬಗ್ಗೆ ಸಾರ್ವಜನಿಕರು. ಸಂಘ-ಸಂಸ್ಥೆ ಮುಖಂಡರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಂದ ಸಾಕಷ್ಟು ಟಿಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಸೆ.30 ಸೋಮವಾರ ಹೇಮಾವತಿ ಜಲಾಶಯಕ್ಕೆ ತೆರಳಿ ಬಾಗಿನ ಬಿಡಲಿದ್ದಾರೆ. ಮಳೆಗಾಲದಲ್ಲಿ ಜಲಾಶಯ ತುಂಬಿ ತುಳುಕುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೂಲಕ ಜಲಾಶಯಕ್ಕೆ ಬಾಗಿನ ಬಿಡಲು ಪ್ರಯತ್ನ ನಡೆಸಿದ್ದರು ಕಡೆಗೂ ರಾಜಣ್ಣ ಅವರ ಆಸೆ ಈಡೇರಲಿಲ್ಲ.
ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ- ಸಕಲೇಶಪುರ ತಾಲೂಕಿನ ಮಲೆನಾಡಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿದಿದ್ದರಿಂದ ಅತಿವೃಷ್ಟಿ ಕೂಡ ಉಂಟಾಯಿತು. ಜಲಾಶಯದಲ್ಲಿ ನೀರಿನ ಸಂಗ್ರಹಣೆಯ ಮಟ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಅಣೆಕಟ್ಟೆಯಿಂದ 1 ಲಕ್ಷ ಕ್ಯೂಸೆಕ್ ಮೀರಿ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡಲಾಯಿತು. ಇದರ ಪರಿಣಾಮ ಹೊಳೆನರಸೀಪುರ ಪಟ್ಟಣ ಹಾಗು ಸಕಲೇಶಪುರ ಪಟ್ಟಣದ ನೂರಾರು ಮನೆಗಳು ಜಲಾವೃತಗೊಂಡು ಅವಾಂತರವೇ ಸೃಷ್ಟಿಯಾಯಿತು. ಜನರನ್ನು ನಿರಾಶ್ರಿತರ ಕ್ರೇಂದ್ರಕ್ಕೂ ಕಳುಹಿಸಬೇಕಾದ ಸಂದರ್ಭವೂ ಸೃಷ್ಟಿಯಾಗಿತ್ತು.
ಹೇಮಾವತಿ ಜಲಾಶಯ ಮಾತ್ರವಲ್ಲದೇ ಬೇಲೂರು ತಾಲೂಕಿನಲ್ಲಿರುವ ಯಗಚಿ, ಆಲೂರು ತಾಲೂಕಿನಲ್ಲಿರುವ ವಾಟೆಹೊಳೆ ಜಲಾಶಯವೂ ಭರ್ತಿಯಾಗಿದ್ದವು. ಆದರೆ, ಕಾಂಗ್ರೆಸ್ ಸರ್ಕಾರದ ರಾಜಕೀಯ ಜಂಜಾಟ, ಹಗರಣಗಳ ನಡುವೆ ಜನಪ್ರತಿನಿಧಿಗಳು ಭರ್ತಿಯಾಗಿರುವ ಜಿಲ್ಲೆಯ ಮೂರು ಜಲಾಶಗಳಿಗೆ ಬಾಗಿನ ಅರ್ಪಣೆಯನ್ನು ಕಡೆಗಣಿಸಿಕೊಂಡೇ ಬಂದರು. ಎತ್ತಿನಹೊಳೆ ಯೋಜನೆ 1ನೇ ಹಂತ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮತ್ರಿ ಡಿ.ಕೆ.ಶಿವಕುಮಾರ್ ಸೇರಿ ಸಚಿವರ ದಂಡೇ ಜಿಲ್ಲೆಗೆ ಹರಿದು ಬಂದರೂ ಈ ಮೂರು ಜಲಾಶಯಗಳತ್ತಾ ಯಾರೊಬ್ಬರು ಗಮನ ಹರಿಸಲೇ ಇಲ್ಲ.

ಈಡೇರದ ರಾಜಣ್ಣ ಆಸೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಿಂದಲೇ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಬೇಕೆಂದು ಹಠ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಕಳೆದ 2 ತಿಂಗಳಿಂದ ದಿನ ಮುಂದೂಡಿಕೊಂಡೇ ಬಂದರು. ಆದರೀಗ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಸಿಲುಕಿಕೊಂಡು ಎಫ್‌ಐಆರ್ ದಾಖಲಾದ ಬಳಿಕ, ಸಿದ್ದರಾಮಯ್ಯ ಅವರನ್ನು ಜಿಲ್ಲೆಗೆ ಕರೆಸುವ ಆಸೆಯನ್ನು ಕೈಬಿಟ್ಟು ತಾವೇ ಸೋಮವಾರ ಬೆಳಿಗ್ಗೆ 9.30ಕ್ಕೆ ಅಧಿಕಾರಿಗಳ ಜೊತೆಗೂಡಿ ಬಾಗಿನ ಅರ್ಪಣೆಗೆ ಮುಂದಾಗಿದ್ದಾರೆ.

33ನೇ ಬಾರಿಗೆ ಹೇಮಾವತಿ ಜಲಾಶಯ ಭರ್ತಿ:
1969-70ನೇ ಸಾಲಿನಲ್ಲಿ ಹಾಸನ ತಾಲೂಕಿನ ಗೊರೂರು ಬಳಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗಿ, 1980 ರಲ್ಲಿ ಕಾಮಗಾರಿ ಪೂರ್ಣಗೊಂಡಿತು. ಜಲಾಶಯದಲ್ಲಿ ನೀರಿನ ಸಂಗ್ರಹಣೆ ಆರಂಭವಾಗಿ 49 ವರ್ಷದಲ್ಲಿ 33ನೇ ಬಾರಿ ಹೇಮಾವತಿ ಜಲಾಶಯ ಭರ್ತಿಯಾಗಿದೆ.
2022 ರಲ್ಲಿ ಜುಲೈ 25 ರಂದು ಹಾಗು 2020ರಲ್ಲಿ ಆಗಸ್ಟ್ 21ರಂದು ಉಸ್ತುವಾರಿ ಸಚಿವರಾಗಿದ್ದ ಕೆ.ಗೋಪಾಲಯ್ಯ ಬಾಗಿನ ಅರ್ಪಿಸಿದ್ದರು. ಕಳೆದ ವರ್ಷ ಬರಗಾಲ ಇದ್ದರಿಂದ ನೀರಿನ ಬಾಗಿನ ಅರ್ಪಿಸಿರಲಿಲ್ಲ. ಈ ವರ್ಷ ಮಳೆಗಾಲ ಆಂಭವಾಗಿ ಒಂದೇ ತಿಂಗಳಿಗೆ ಅಣೆಕಟ್ಟೆ ತುಂಬಿದರೂ ಬಾಗಿನ ಅರ್ಪಿಸುವ ಭಾಗ್ಯ ಕೂಡಿ ಬಂದಿರಲಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ಕೇಳಿಬಂದ ಹಿನ್ನಲೆ ಉಸ್ತುವಾರಿ ಸಚಿವ ರಾಜಣ್ಣ ಅವರು ತಮ್ಮ ಹಠವನ್ನು ಕೈಬಿಟ್ಟು ಬಾಗಿನ ಅರ್ಪಣೆಗೆ ಮುಂದಾಗಿದ್ದಾರೆ.

ಜಲಾಶಯದ ನೀರಿನ ಮಟ್ಟ:
ಭಾನುವಾರ ಬೆಳಿಗ್ಗೆ 6 ಗಂಟೆಗೆ ಕೊನೆಗೊಂಡಂತೆ 2,922 ಅಡಿ (37.103 ಟಿಎಂಸಿ) ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಹೇಮಾವತಿ ಜಲಾಶಯಲ್ಲಿ ಪ್ರಸ್ತುತ 2920.70 ಅಡಿ (35.847 ಟಿಎಂಸಿ) ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 4,842 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಒಟ್ಟು 6575 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಹೇಮಾವತಿ ಎದದಂಡೆ ನಾಲೆಗೆ 4250 ಕ್ಯೂಸೆಕ್, ಬಲದಂಡೆ ನಾಲೆಗೆ 750 ಕ್ಯೂಸೆಕ್, ನದಿಗೆ 1225 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ತುಮಕೂರಿಗೂ ಹೆಚ್ಚಿನ ಅನುಕೂಲ:
ಹೇಮಾವತಿ ಜಲಾಶಯದಿಂದ ಹಾಸನ, ಮಂಡ್ಯ, ಮೈಸೂರು ಸೇರಿದಂತೆ ತುಮಕೂರು ಜಿಲ್ಲೆಗೂ ಕೂಡ ಹೆಚ್ಚಿನ ಅನುಕೂಲವಾಗಲಿದೆ. ಸ್ವತಹ ತುಮಕೂರು ಜಿಲ್ಲೆಯವರೇ ಉಸ್ತುವಾರಿ ಸಚಿವರಾದ ರಾಜಣ್ಣ ಎರಡು ತಿಂಗಳಿನಿಂದ ಹೇಮಾವತಿ ಜಲಾಶಯಕ್ಕೆ ಭಾಗಿನ ಬಿಡಲು ಮೀನಾ ಮೇಷ ಎಣಿಸಿದರು. ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲು ಇದ್ದಂತಹ ಆಸಕ್ತಿ ಬಾಗಿನ ಬಿಡಲು ಏಕೆ ಇಲ್ಲ ಎಂಬ ಸಾರ್ವಜನಿಕರ ಪ್ರಶ್ನೆ, ಈಗಲಾದರೂ ಬಾಗಿನ ಬಿಟ್ಟಿದ್ದಾರೆ ಎಂಬ ಸಂತೋಷವಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net