ನಾಳೆ ಹಾಸನಕ್ಕೆ ರೈಲ್ವೆ ಸಚಿವ ವಿ ಸೋಮಣ್ಣ ಭೇಟಿ:ಹಲವು ನಿರೀಕ್ಷೆ

ನಾಳೆ ಹಾಸನಕ್ಕೆ ರೈಲ್ವೆ ಸಚಿವ ವಿ ಸೋಮಣ್ಣ ಭೇಟಿ:ಹಲವು ನಿರೀಕ್ಷೆ
Published on

ಹಾಸನ: ಕೇಂದ್ರ ಸರ್ಕಾರದ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮೊದಲ ಬಾರಿಗೆ ಹಾಸನಕ್ಕೆ ಜು.18ರಂದು ಭೇಟಿ ನೀಡುತ್ತಿದ್ದು, ಜಿಲ್ಲೆಯ ಹಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವಿ.ಸೋಮಣ್ಣ ರೈಲ್ವೆ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಬೇಲೂರಿಗೆ ಆಗಮಿಸಿ ಅಲ್ಲಿ ನಡೆಯುವ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ಹಳೇಬೀಡಿನ ಪುಷ್ಪಗಿರಿ ಮಹಾ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ.ನಂತರ ನಗರಕ್ಕೆ ಆಗಮಿಸುವರು, ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೈಋತ್ಯ ರೈಲ್ವೆ ಮತ್ತು ನಿರ್ಮಾಣ ಸಂಸ್ಥೆಯ ಹಿರಿಯ ಅಧಿಕಾರಿಗಳ ಜತೆಯಲ್ಲಿ ಹಾಸನ-ಬೇಲೂರು ಹೊಸ ರೈಲು ಮಾರ್ಗದ ಪ್ರಗತಿ ಪರಿಶೀಲನೆ ಹಾಗೂ ಇತರೆ ರೈಲ್ವೆ ಕಾಮಗಾರಿಗಳ ಬಗ್ಗೆ ಸ್ಥಳೀಯ ಆಡಳಿತದೊಂದಿಗೆ ಸಭೆ ನಡೆಸಲಿದ್ದಾರೆ.
ಸಭೆ ಬಳಿಕ ಎನ್.ಆರ್.ವೃತ್ತದ ಬಳಿಯ ಲೆವೆಲ್ ಕ್ರಾಸಿಂಗ್ 3 ಬದಲಿಗೆ ನಿರ್ಮಾಣವಾಗುತ್ತಿರುವ ರಸ್ತೆ ಮೇಲ್ಸೇತುವೆ (ರೋಡ್ ಓವರ್ ಬ್ರಿಡ್ಜ್) ಮತ್ತು ಹಾಸನ ರೈಲ್ವೆ ನಿಲ್ದಾಣದ ಪರಿಶೀಲನೆ ಸಹ ನಡೆಸಲ್ಲಿದ್ದಾರೆ. ನಗರದ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲಿನಲ್ಲಿ ಬೆಂಗಳೂರಿಗೆ ತೆರಳುವ ಸಚಿವರು, ಹಾಸನ-ಬೆಂಗಳೂರು ನಡುವಿನ ರೈಲ್ವೆ ವ್ಯವಸ್ಥೆ ವೀಕ್ಷಣೆ ಮಾಡಲಿದ್ದಾರೆ.
ಸಚಿವ ಚೊಚ್ಚಲ ಭೇಟಿಯಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಮೇಲ್ಸೇತುವೆ ಮತ್ತೊಂದು ಬದಿಯ ಕಾಮಗಾರಿ ಶೀಘ್ರ ಪುನಾರಂಭ ಜೊತೆಗೆ ಹಾಸನ-ಬೇಲೂರು-ಚಿಕ್ಕಮಗಳೂರು ನೂತನ ರೈಲುಮಾರ್ಗ ಕಾಮಗಾರಿ ವೇಗ ಸಿಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ.
ಈ ಹಿಂದೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು ಮತ್ತು ರೈಲ್ವೆ ನಿಲ್ದಾಣದ ವಿಸ್ತರಣೆ ಹಾಗೂ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಜಿಲ್ಲೆಯ ಜೆಡಿಎಸ್‌ನ ಶಾಸಕರು ಕೇಂದ್ರದ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
2017ರಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಾರಂಭಗೊಂಡು ಇಂದಿಗೂ ಕೂಡ ಕುಂಟುತ್ತಾ ಸಾಗಿದೆ. ಕಾಮಗಾರಿಯ ವೆಚ್ಚ ದುಪ್ಪಟ್ಟು ಆಗಿರುವುದರಿಂದ ಉಳಿದ ಕಾಮಗಾರಿಗೆ 40 ಕೋಟಿ ಅನುದಾನದ ಅವಶ್ಯಕತೆ ಇದೆ. ಇದಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಲು ತಿರಸ್ಕರಿಸಿದೆ. ನಂತರ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈಗಾಗಲೇ ಅನುಮತಿ ಸಿಕ್ಕಿದ್ದು, ಹಣಕಾಸು ಇಲಾಖೆಯಲ್ಲಿ ಒಪ್ಪಿಗೆ ಮಾತ್ರ ಸಿಗಬೇಕಾಗಿದೆ.
ಇದಲ್ಲದೆ ಹೊಳೆನರಸಿಪುರದ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಕುಸಿದು ಬಿದ್ದಿದ್ದರಿಂದ ಮತ್ತೊಮ್ಮೆ ಕಾಮಗಾರಿ ನಡೆಯುತ್ತಿದ್ದು, ಅದು ಕೂಡ ಕುಂಟುತ್ತ ಸಾಗಿದೆ. ಅಲ್ಲದೆ ಆಲೂರಿನಲ್ಲಿ ಇನ್ನೂ ಹೆಚ್ಚುವರಿ ರೈಲುಗಳನ್ನ ನಿಲ್ಲಿಸುವಂತೆ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತದೆ. ಇದರ ಜತೆಗೆ ಬೆಂಗಳೂರು-ಮಂಗಳೂರು ಹೆಚ್ಚುವರಿ ರೈಲು ಬಿಡುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.
ವಿ ಸೋಮಣ್ಣ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಅತ್ಯಪ್ತರಾಗಿದ್ದು ಇದರ ಜೊತೆಗೆ ಜೆಡಿಎಸ್ ಪಕ್ಷದ ನಾಯಕ ಹಾಗೂ ಕೇಂದ್ರದ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ತವರು ಜಿಲ್ಲೆಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಹಲವು ಕಾಮಗಾರಿಗಳ ಬಗ್ಗೆ ವಿಶೇಷ ಗಮನ ಹರಿಸಲಿದ್ದಾರೆ. ಹೆಚ್ಚಿನ ಹಣಕಾಸಿನ ಅವಶ್ಯಕತೆ ಇದ್ದಾರೆ ಕುಮಾರಸ್ವಾಮಿ ಅವರ ನೆರವಿನೊಂದಿಗೆ ಅನುದಾನವನ್ನ ಬಿಡುಗಡೆ ಮಾಡಿಸುವುದರ ಜೊತೆಗೆ ಕಾಮಗಾರಿಯನ್ನು ಶೀಘ್ರದಲ್ಲೇ ಕಾಮಗಾರಿಯನ್ನ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ

ಸೋಮಣ್ಣ ಮುಂದೆ ಹಲವು ಬೇಡಿಕೆ:
ಬಹುದಿನದ ಬೇಡಿಕೆಯಾಗಿರುವ ಹಾಸನ ಬೇಲೂರು ಚಿಕ್ಕಮಂಗಳೂರು ರೈಲ್ವೆ ಕಾಮಗಾರಿಗೆ ಈಗಾಗಲೇ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ, ಕೆಲವು ಕಡೆ ಸಮಸ್ಯೆಗಳಿದ್ದು, ಈ ಕಾಮಗಾರಿಗೆ ವೇಗ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿದೆ. ಇದರ ಜತೆಗೆ ಹಾಸನ ಅರಕಲಗೂಡು ರೈಲ್ವೆ ಮಾರ್ಗ ಮತ್ತು ಹಾಸನ ,ಅರಸೀಕೆರೆ ರೈಲ್ವೆ ನಿಲ್ದಾಣವನ್ನ ಮೇಲ್ದರ್ಜೆಗೆ ಏರಿಸಲು ಈಗಾಗಲೇ ಉದ್ಘಾಟನೆ ಮಾಡಲಾಗಿದೆ. ಕಾಮಗಾರಿ ನಡೆಯುತ್ತಿದ್ದು ಇದನ್ನು ಸಹ ಪರಿಶೀಲನೆ ನಡೆಸಲಿದ್ದಾರೆ.

ನನ್ನ ಮನವಿಗೆ ಸ್ಪಂದಿಸಿ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಇಂದು ನಗರಕ್ಕೆ ಆಗಮಿಸಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸ್ಥಗಿತಗೊಂಡಿರುವ ಮೇಲ್ಸೇತುವೆ ಕಾಮಗಾರಿಯ ಪರಿಶೀಲನೆ ಮತ್ತು ಹಲವು ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳ ಪರಿಶೀಲನೆ ಮಾಡಲು ಮುಂದಾಗಿರುವುದು ನಿಜಕ್ಕೂ ಸಂತೋಷ ತಂದಿದೆ.
-ಕೆ.ಎನ್.ರಾಜಣ್ಣ ಜಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net