

ಹಾಸನ: 25 ದಿನಗಳ ಅಂತರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಸನ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ಜಿಲ್ಲೆಗೆ ಆಗಮಿಸುವ ಸಿಎಂ ಬೊಮ್ಮಾಯಿ ಅವರು ಎರಡು ಅತ್ಯಾಧುನಿಕ ಆಸ್ಪತ್ರೆಗಳು ಸೇರಿದಂತೆ 24 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಹತ್ತು ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ವೇದಿಕೆಯಲ್ಲಿ ಸಿಎಂ ಬೊಮ್ಮಾಯಿ ಅವರು 24 ಕಾಮಗಾರಿಗಳ ಉದ್ಘಾಟನೆ ಮತ್ತು 11.46 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ 10 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಚಿವರಾದ ಕೆ ಗೋಪಾಲಯ್ಯ, ಗೋವಿಂದ್ ಎಂ.ಕಾರಜೋಳ, ಅರಗ ಜ್ಞಾನೇಂದ್ರ, ಆರ್.ಅಶೋಕ್, ಡಾ.ಕೆ.ಸುಧಾಕರ್, ಡಾ ಸಿ.ಎನ್.ಅಶ್ವಥ್ ನಾರಾಯಣ, ಆನಂದ್ ಸಿಂಗ್, ಸಿ.ಸಿ.ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಡಾ ಕೆ.ಸಿ.ನಾರಾಯಣಗೌಡ ಭಾಗವಹಿಸಲಿದ್ದು ಶಾಸಕ ಪ್ರೀತಂ ಜೆ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ, ಸಿ.ಎನ್.ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ, ಡಾ.ಸೂರಜ್ ರೇವಣ್ಣ, ನಗರಸಭೆ ಅಧ್ಯಕ್ಷ ಆರ್ ಮೋಹನ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಡಿಎಚ್‌ಒ ಡಾ.ಶಿವಸ್ವಾಮಿ ಇತರರು ಉಪಸ್ಥಿತರಿರುತ್ತಾರೆ.
ಉದ್ಘಾಟನೆಯಾಗುವ ಕಾಮಗಾರಿಗಳು
ಹಿಮ್ಸ್ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಸೂಪರ್ ಸ್ಷೆಷಾಲಿಟಿ ಆಸ್ಪತ್ರೆ, ಶುಶ್ರೂಷಾಧಿಕಾರಿಗಳ ವಸತಿ ಸಮುಚ್ಛಯ, ಎಂಬಿಬಿಎಸ್ ಪುರುಷ ಮತ್ತು ಮಹಿಳಾ ಪ್ರಶಿಕ್ಷಣಾರ್ಥಿಗಳ ವಸತಿ ನಿಲಯ, ಶ್ರೀ ಚಾಮರಾಜೇಂದ್ರ ಆಸ್ಪತ್ರೆ ಕಟ್ಟಡದಲ್ಲಿನ 300 ಹಾಸಿಗೆಗಳ ಮೇಲ್ಮಹಡಿ ಆಸ್ಪತ್ರೆ, ಸಿಟಿ ಸ್ಕಾೃನ್ ಉಪಕರಣ, ಉನ್ನತೀಕರಿಸಿದ ಕ್ಯಾನ್ಸರ್ ಕೇರ್ ಘಟಕ, ಪರೀಕ್ಷಾ ಹಾಲ್ ಗ್ಯಾಲರಿ, ಟೈಪ್ ಲೆಕ್ಚರ್ ಹಾಲ್, 90 ಹಾಸಿಗೆಗಳ ಐಸಿಯು, ಮಲ್ಟಿ ಡಿಸಿಪ್ಲಿನರಿ ರಿಸರ್ಚ್ ಯುನಿಟ್, ಹ್ಯೂಮನ್ ಮಿಲ್ಕ್ ಬ್ಯಾಂಕ್, ಡಯಾಲಿಸೀಸ್ ಘಟಕ ಲೋಕಾರ್ಪಣೆಗೊಳ್ಳಲಿವೆ.
ಅಲ್ಲದೇ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಿರ್ಮಿಸಿರುವ ಜಿಲ್ಲಾ ಶಸ್ತ್ರ ಸಂಗ್ರಹಗಾರ ಕಟ್ಟಡ, ಜಿಲ್ಲಾ ಶ್ವಾನದಳ ಘಟಕ, ಸಂಚಾರ ಪೊಲೀಸ್ ಠಾಣೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಚನ್ನಪಟ್ಟಣ ಬಡಾವಣೆಯಲ್ಲಿನ ಕಾಮನ್ ಸರ್ವಿಸ್ ಸೆಂಟರ್(ಸದ್ಬಾವನಾ ಮಂಟಪ), ನೀರಾವರಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿರುವ ಮಹಾರಾಜ ಉದ್ಯಾನವನ, ಗಂಧದಕೋಟಿ ಉದ್ಯಾನವನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ 400 ಮೀಟರ್ ಸಿಂಥೇಟಿಕ್ ಟ್ರಾೃಕ್, ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ವಸ್ತು ಸಂಗ್ರಹಾಲಯ, ಶ್ರೀಮತಿ ಇಂದಿರಾ ಗಾಂಧಿ ನಸಿರ್ಂಗ್ ಬಾಲಕಿಯರ ವಿದ್ಯಾರ್ಥಿ ನಿಲಯ, ಸರ್ಕಾರಿ ವಿಜ್ಞಾನ ಕಾಲೇಜಿನ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ.
ಯಾವೆಲ್ಲಾ ಕಾಮಗಾರಿಗಳಿಗೆ ಭೂಮಿಪೂಜೆ?
ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ನಾತಕೋತ್ತರ ಬಾಲಕರ ಕಟ್ಟಡ, ವೈದ್ಯರ ವಸತಿ ಸಮುಚ್ಛಯ, ಲೈಬ್ರರಿ ಮತ್ತು ಸ್ಕಿಲ್ಸ್ ಲ್ಯಾಬ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದ ಮೂಲಭೂತ ಸೌಕರ್ಯಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಸ್ನಾತಕೊತ್ತರ ವಿದ್ಯಾರ್ಥಿ ನಿಲಯ, ಲೋಕೋಪಯೋಗಿ ಇಲಾಖೆಯ ಜಿಲ್ಲಾಡಳಿತ ಕಚೇರಿ ಸಂಕೀರ್ಣ, ಮಿನಿ ವಿಧಾನಸೌಧ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಚೇರಿ ಸಂಕೀರ್ಣ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ.