

ಚಾಮರಾಜನಗರ: ಕೇಂದ್ರ ಸರ್ಕಾರದ ಆದೇಶದಂತೆ ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್‌ಒ) ಗಳ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾ ಘಟಕದಿಂದ ನ.18ರಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಶಂಕರ ತಿಳಿಸಿದರು.
ರಾಜ್ಯದ ಎಲ್ಲಡೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎಲ್ಲ ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಇವುಗಳ ನಿರ್ವಹಣೆಗಾಗಿ ರಾಜ್ಯದಲ್ಲಿ ಪ್ರಸ್ತುತ 6,182 ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರ ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಕ್ಷೇಮ ಕೇಂದ್ರದ ದಿನನಿತ್ಯದ ಚಟುವಟಿಕೆಗಳು ಹಾಗೂ ಸೇವೆಗೆ ತೊಡಕಾಗುತ್ತಿದೆ. ಇದರಿಂದ ಸಿಎಚ್‌ಒಗಳು ಮಾನಸಿಕ ಕಿರುಕುಳ ಮತ್ತು ಹಿಂಸೆ ಅನುಭವಿಸುತ್ತಿದ್ದಾರೆ. ಬಹಳಷ್ಟು ಸಿಎಚ್‌ಒಗಳು ಕರ್ತವ್ಯದಿಂದ ಹಿಂದೆ ಸರಿದಿದ್ದಾರೆ. ಕೆಲ ಸಿಎಚ್‌ಒಗಳು ಪ್ರಾಣವನ್ನು ಸಹ ಬಿಟ್ಟಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಭಿಯಾನದ ಉನ್ನತಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ವಂದಿಸುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೇಂದ್ರ ಸರ್ಕಾರದ ಆದೇಶದನ್ವಯ ಸಮುದಾಯ ಆರೋಗ್ಯ ಅಧಿಕಾರಿಗಳ ಕಾರ್ಯಕ್ಷಮತೆ ಆಧಾರಿತ ತಿಂಗಳ ಮಾಸಿಕ ಪ್ರೋತ್ಸಾಹ ಧನ 15,000 ರೂ. ಪಾವತಿಸಬೇಕು. ಆದರೆ ರಾಜ್ಯದ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಮಾರ್ಗಸೂಚಿ ಬದಿಗೆ ಒತ್ತಿ 8000 ರೂ.ಗಳನ್ನು ಮಾತ್ರ ಪ್ರೋತ್ಸಾಹ ಧನವನ್ನಾಗಿ ನೀಡುತ್ತಿದ್ದಾರೆ. ಹಾಗಾಗಿ ಮಾರ್ಗಸೂಚಿಯ ಪ್ರೋತ್ಸಾಹ ಧನ ಪಾವತಿಸಬೇಕು. ಜತೆಗೆ ಎಲ್ಲ ಸಿಎಚ್‌ಒಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಖಜಾಂಚಿ ಪ್ರಮೋದ್, ಮಾಧ್ಯಮ ಸಂಚಾಲಕ ಮಹಮ್ಮದ್ ಶಾದಿಕ್, ಸಲಹಾ ಸಮಿತಿ ಸದಸ್ಯ ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.