ನಾಳೆ ರಂಗಸಮುದ್ರ ಚಲನಚಿತ್ರ ಬಿಡುಗಡೆ

ನಾಳೆ ರಂಗಸಮುದ್ರ ಚಲನಚಿತ್ರ ಬಿಡುಗಡೆ
Published on

ಹಾಸನ: ಬಾರಿ ಕುತೂಹಲ ಮೂಡಿಸಿರುವ ಕನ್ನಡ ಚಲನಚಿತ್ರ ರಂಗಸಮುದ್ರ ಜನವರಿ 19ರ ಶುಕ್ರವಾರದಂದು ರಾಜ್ಯಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಹಾಸನ ನಗರದ ಪಿಕ್ಚರ್ ಪ್ಯಾಲೇಸ್‌ನಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ಹೊಯ್ಸಳ ಗೆಳೆಯರ ಬಳಗದ ಸಚಿನ್ ತಿಳಿಸಿದರು.
ಶಿಕ್ಷಣದ ಮಾನ್ಯತೆ, ಧರ್ಮ, ಅಧರ್ಮ ಸೇರಿದಂತೆ ಇತರೆ ಅಂಶಗಳನ್ನು ಇಟ್ಟುಕೊಂಡು ಚಲನಚಿತ್ರ ನಿರ್ಮಾಣ ಮಾಡಲಾಗಿದೆ. ಈ ಚಿತ್ರದಲ್ಲಿ ಉತ್ತಮ ಕಥೆ, ಸಂಭಾಷನೆ, ಸಾಹಿತ್ಯ ಅದ್ಭುತವಾಗಿ ಮೂಡಿ ಬಂದಿದೆ. ಹೆಚ್ಚಿನ ಜನರು ಇಂತಹ ಅರ್ಥಪೂರ್ಣ ಕನ್ನಡ ಸಿನಿಮಾವನ್ನು ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ರಂಗಸಮುದ್ರ ಚಿತ್ರದಲ್ಲಿ ಯಾರು ನಾಯಕರಿಲ್ಲ. ಹೆಸರಾಂತ ಗಾಯಕರಾದ ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಮತ್ತು ದೇಸಿ ಮೋಹನ್ ನಾಲ್ಕು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದು, ನವೀನ್ ಸಜ್ಜು ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರೆ. ಹೊಯ್ಸಳ ನಿರ್ಮಾಣದ ರಂಗಸಮುದ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯಾಗೌಡ, ಮಹೇಂದ್ರ ಸೇರಿದಂತೆ ಹಲವು ತಾರಾಗಣವಿರುವ ಉತ್ತಮ ಚಿತ್ರವಾಗಿದೆ ಎಂದು ಹೇಳಿದರು.
ರಾಜ್‌ಕುಮಾರ್ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ರಾಘವೇಂದ್ರ ರಾಜ್‌ಕುಮಾರ್ ಅವರು ಕಳೆದ ಬುಧವಾರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರು. ರಂಗಾಯಣ ರಘು ಅವರು ಮಹತ್ವದ ಪಾತ್ರವನ್ನು ನಿರ್ವಹಿಸಿರುವ ಈ ಚಿತ್ರವು ಇಂದು ತೆರೆಗೆ ಬರಲಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಮನಮೋಹಕ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗಿರೀಶ್, ಸಂದೀಪ್, ಪ್ರದೀಪ್, ನಿತ್ಯಾನಂದ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net